ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಸಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬಹೃತ್ ವಿದ್ಯುತ್ ಸ್ಥಾವರ ಇದ್ದರೂ ಕೂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಹೀಗಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಮಾರ್ಚ್ ತಿಂಗಳೊಳಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರೊಂದಿಗೆ ಮಾತುಕತೆ ನಡೆಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಬೇಡಿಕೆ ಸಲ್ಲಿಸಲಿದೆ ಎಂದು ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ತಿಳಿಸಿದರು.

ಈ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010ರಲ್ಲಿ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ 1300 ಮೆಗಾ ವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗಿದೆ. ಇದೇ ವೇಳೆ ನಾಗರ್ಜುನ ವಿದ್ಯುತ್ ಸ್ಥಾವರದಿಂದ ಶೇ. 45ರಷ್ಟು ವಿದ್ಯುತ್ ಅನ್ನು ಬೆಂಗಳೂರು ನಗರಕ್ಕೆ ಪೂರೈಸುವ ಒಪ್ಪಂದ ಕೂಡ ಆಗಿತ್ತು. ಆದರೆ ಜಿಲ್ಲೆಯಲ್ಲಿ ಬಹೃತ್ ವಿದ್ಯುತ್ ಸ್ಥಾವರ ಇದ್ದರೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಆಗುತ್ತಾ ಇಲ್ಲ. ಆದ್ದರಿಂದ ಮತ್ತೆ ಇಂಧನ ಸಚಿವರನ್ನು‌ ಭೇಟಿಯಾಗಿ ಉಭಯ ಜಿಲ್ಲೆಗೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಡ ಹೇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಉಪಾಧ್ಯಕ್ಷರಾದ ಕೆ.ಪಿ. ಜಗದೀಶ್ ಅಧಿಕಾರಿ, ಪ್ರೊ‌. ಶಂಕರ್, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್, ಜೊತೆ ಕಾರ್ಯದರ್ಶಿ ಶೇಖರ್ ಗುಜ್ಜರ್‌ಬೆಟ್ಟು ಇದ್ದರು.