ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ನಿಯಮ ಸಡಿಲಿಕೆ ಸರಿಯಲ್ಲ – ಮಾಜಿ ಶಾಸಕ ಅರುಣ್ ಶಹಾಪುರ

ರಾಜ್ಯ ಸರಕಾರ ಮ್ಯಾನೇಜ್‌ಮೆಂಟ್‌ ಲಾಬಿಗೆ ತಲೆಬಾಗಿದ್ದು, ಅಲ್ಪಸಂಖ್ಯಾಕರ ಶಿಕ್ಷಣ ಸಂಸ್ಥೆಗಳಲ್ಲಿ ಆ ಸಮುದಾಯದ ಯಾವೊಬ್ಬ ವಿದ್ಯಾರ್ಥಿ ದಾಖಲಾಗದೇ ಇದ್ದರೂ ಅಲ್ಪಸಂಖ್ಯಾಕ ಮಾನ್ಯತೆ ಪಡೆಯಬಹುದು ಎಂದು ಸರಕಾರ ನಿರ್ಧರಿಸಿರುವುದು ದಲಿತರು ಹಾಗೂ ಹಿಂದುಳಿದ ವರ್ಗಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಅಲ್ಪಸಂಖ್ಯಾಕರ ಶಿಕ್ಷಣ ಸಂಸ್ಥೆಗಳಿಗೆ ಈ ರೀತಿಯಲ್ಲಿ ನಿಯಮ ಸಡಿಲಿಕೆ ಸರಿಯಲ್ಲ ಎಂದು ಮಾಜಿ ಶಾಸಕ ಅರುಣ್ ಶಹಾಪುರ ಕಿಡಿಕಾರಿದ್ದಾರೆ.ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಮಕ್ಕಳ ಆಧಾರಿತ ಆಗಿರಬೇಕೇ ಹೊರತು ಆಡಳಿತ ಮಂಡಳಿ ಆಧಾರಿತವಾಗಿರಬಾರದು.

ಹಿಂದೆ ಬಿಜೆಪಿ ಸರಕಾರದ ಸಂದರ್ಭದಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಅಲ್ಪಸಂಖ್ಯಾತರ ಶಾಲೆಗಳಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಅದೇ ಸಮುದಾಯದವರು ಆಗಿದ್ದಾಗ ಮಾತ್ರ ಅಲ್ಪಸಂಖ್ಯಾತ ಸಂಸ್ಥೆಯ ಅರ್ಹತೆ ಪಡೆಯಬಹುದಿತ್ತು. ಕಾಂಗ್ರೆಸ್ ಅಧಿಕಾರದಲ್ಲಿ ತನ್ವೀರ್ ಸೇಠ್ ಶಿಕ್ಷಣ ಮಂತ್ರಿಯಾಗಿದ್ದಾಗ ಅದನ್ನು ಶೇ.50ಕ್ಕೆ ಇಳಿಸಿದ್ದರು. ಇದೀಗ ಕಾಂಗ್ರೆಸ್ ಸರಕಾರ ಶೂನ್ಯಕ್ಕೆ ಇಳಿಸಿರುವುದು ಸರಿಯಲ್ಲ.

ಅಲ್ಪಸಂಖ್ಯಾಕರ ಶಿಕ್ಷಣ ಸಂಸ್ಥೆಗಳಿಗೆ ಹಲವು ವಿನಾಯತಿಗಳು ಇರುವುದರಿಂದ ಅದರ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸರಕಾರ ತಕ್ಷಣ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಗದಗಿನ ಪಂಚಾಯತ್ ಮತ್ತು ಗ್ರಾಮೀಣಭಿವೃದ್ದಿ ವಿಶ್ವವಿದ್ಯಾಲಯದ ಕುಲಪತಿ ಅಧಿಕಾರವನ್ನು ರಾಜ್ಯಪಾಲರಿಂದ ಕಿತ್ತುಕೊಂಡು, ಮುಖ್ಯಮಂತ್ರಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಅದರಿಂದ ವಿ.ವಿ.ಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬೆಳಗಾವಿ ಅಧಿವೇಶನದಲ್ಲಿ ಈ ತಿದ್ದುಪಡಿಗೆ ಅವಕಾಶ ನೀಡಬಾರದು ಎಂದರು.

ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇದಿಕೆಯಲ್ಲಿ ತನಗೆ ಕುರ್ಚಿ ನೀಡಲಿಲ್ಲ ಎಂದು ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸದಿರುವ ಯಾಸೀರ್ ಅಹಮ್ಮದ್ ಖಾನ್ ಪಠಾಣ್, ಉಪಕುಲಪತಿಗೆ ಗೂಂಡಾಗಿರಿ ನಡೆಸಿ ಬೆದರಿಕೆ ಒಡ್ಡಿದ್ದಾರೆ. ಪಠಾಣ್ ಮತ್ತು ಅವರ ಬೆಂಬಲಿಗರ ಮೇಲೆ ಪ್ರಕರಣ ದಾಖಲಿಸಬೇಕು ಎಂದವರು ಆಗ್ರಹಿಸಿದರು.

ರಾಜ್ಯದ ಸಾರ್ವಜನಿಕ ರಂಗದ 167 ಸಂಸ್ಥೆಗಳಲ್ಲಿ 19 ಸಂಸ್ಥೆಗಳು ಮಾತ್ರ ಲಾಭದಲ್ಲಿವೆ. ರಾಜ್ಯ ಸರಕಾರ ಈ 19 ಸಂಸ್ಥೆಗಳ 59 ಸಾವಿರ ಕೋಟಿ ರೂ. ಲಾಭವನ್ನು ಇನ್ನುಳಿದ ರೋಗಗ್ರಸ್ತ ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ. ಇದು ಕಂಪೆನಿ ಕಾಯ್ದೆಗೆ ವಿರುದ್ದವಾಗಿದ್ದು, ಒಂದು ಕಂಪೆನಿಯ ಲಾಭವನ್ನು ಇನ್ನೊಂದು ಕಂಪೆನಿಗೆ ವರ್ಗಾಯಿಸುವಂತಿಲ್ಲ, ವರ್ಗಾಯಿಸಿದರೆ ಇತರ ಕಂಪೆನಿಗಳು ನಷ್ಟದಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.