ಉಡುಪಿ: ಉಡುಪಿ ನಗರದ ಪ್ರಮುಖ ಜಂಕ್ಷನ್ ಎನಿಸಿರುವ ಅಂಬಲಪಾಡಿ ಜಂಕ್ಷನ್ ನಲ್ಲಿ ಸೋಮವಾರ ಮೇಲ್ಸೇತುವೆ ಕಾಮಗಾರಿ ಪ್ರಾರಂಭಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜೆಸಿಬಿಗಳು ಕಾರ್ಯಾಚರಣೆಗೆ ಇಳಿದಿವೆ. ಇದೇ ವೇಳೆ ಜಂಕ್ಷನ್ ನಲ್ಲಿ ವಾಹನ ಸಂಚಾರ ನಿರ್ಬಂಧಗೊಂಡಿದ್ದು ಸರ್ವಿಸ್ ರಸ್ತೆಗಳಲ್ಲಿ ವಾಹನ ಸವಾರರ ಪರದಾಟವೂ ಶುರುವಾಗಿದೆ.
ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇತುವೆ ಕಾಮಗಾರಿ ಬೇಡಿಕೆ ಹಲವು ವರ್ಷಗಳಿಂದ ಇದ್ದವು. ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು ಈ ಸಮಸ್ಯೆಗೆ ಪೂರ್ಣವಿರಾಮ ಹಾಕಲು ಮೇಲ್ವೇತುವೆ ಮಾಡಬೇಕು ಎಂಬ ಕೂಗು ಕೇಳಿ ಬಂದಿದ್ದವು. ಇದಕ್ಕೆ ಪೂರಕವಾಗಿ ಹೆದ್ದಾರಿ ಇಲಾಖೆ ಯೋಜನೆಯನ್ನು ಸಿದ್ಧಪಡಿಸಿತ್ತು. ಇತ್ತೀಚೆಗೆ ಸ್ಥಳೀಯರು ಮತ್ತು ಜನಪ್ರತಿನಿಧಿಗಳ ಸಭೆಯೂ ನಡೆದಿತ್ತು.ಸಭೆಯಲ್ಲಿ ಒಂದೂವರೆ ವರ್ಷದೊಳಗೆ ಮೇಲ್ಲೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆಯೂ ಜನಪ್ರತಿನಿಧಿಗಳಿಂದ ಬಂದಿದೆ.
ಅಂಬಲಪಾಡಿ ಮೇಲ್ವೇತುವೆಯು ಮಹೀಂದ್ರ ಶೋರೂಂ ಬಳಿಯಿಂದ ಶ್ಯಾಮಿಲಿ ಸಭಾಂಗಣದವರೆಗೆ ಇರಲಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ರಾಷ್ಟ್ರೀಯ ಹೆದ್ದಾರಿಯ ಸುಮಾರು 1ಕಿ.ಮೀ.ರಸ್ತೆಯಲ್ಲಿ ಸಂಚಾರ ನಿರ್ಬಂಧ ಇರಲಿದೆ. ಸರ್ವಿಸ್ ರಸ್ತೆಯ ಮೂಲಕ ವಾಹನಗಳು ಸಂಚಾರ ಮಾಡಲಿವೆ.ವಾಹನನಿಬಿಡ ಪ್ರದೇಶ ಇದಾಗಿರುವುದರಿಂದ ಕಾಮಗಾರಿ ಸಂದರ್ಭ ಜನರು ಸಾಕಷ್ಟು ಪರದಾಡಬೇಕಾಗಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಯಾವುದೇ ಪರ್ಯಾಯ ಮಾರ್ಗ ಸೂಚಿಸದೆ ಅಂಬಲಪಾಡಿ ಜಂಕ್ಷನ್ ಬಂದ್ ಮಾಡಿ ಕಾಮಗಾರಿ ಶುರು ಮಾಡಿದ್ದಾರೆ. ಇದರಿಂದ ಸಾಕಷ್ಟು ಜನರಿಗೆ ತೊಂದರೆ ಆಗಿದೆ. ಈ ಹೆದ್ದಾರಿ ಮೂಲಕ ನಿತ್ಯ ಮಲ್ಪೆ ಮೀನುಗಾರಿಕೆಯ ವಾಹನಗಳು ಸಹಿತ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಅಂಬಲಪಾಡಿ ದೇವಸ್ಥಾನ ಹಾಗೂ ಶಾಲಾ ಕಾಲೇಜುಗಳಿಗೂ ಸಾಕಷ್ಟು ಮಂದಿ ಈ ಜಂಕ್ಷನ್ ಮೂಲಕ ತೆರಳುತ್ತಾರೆ. ಹೀಗಾಗಿ ಯಾವುದೇ ಮುನ್ಸೂಚನೆ ನೀಡಿದೆ ಹೆದ್ದಾರಿ ಕಾಮಗಾರಿ ಆರಂಭಿಸಿದ್ದು ಸರಿಯಲ್ಲ. ಕೂಡಲೇ ಪರ್ಯಾಯ ಮಾರ್ಗ ಸೂಚಿಸಿ, ವ್ಯವಸ್ಥಿವಾಗಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.