ಅಂಚೆ ಇಲಾಖೆಯಲ್ಲಿದೆ ನಿಮ್ಮ ಪ್ರತಿಭೆ ಪರೀಕ್ಷಿಸುವ ಸ್ಪರ್ಧೆ-ಕೂಡಲೇ ಪತ್ರ ಬರೀರಿ

ಹಿಂದೊಂದು ಕಾಲ ಇತ್ತು, ಅಂಚೆ ಅಣ್ಣ ಮನೆ ಬಾಗಿಲಿಗೆ ಬಂದು ನಿಮಗೊಂದು ಪತ್ರ ಬಂದಿದೆ ಅಂದ್ರೆ ಮನೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅದೇನೋ ಕುತೂಹಲ, ತೆರೆದು ಓದಿ ಮುಗ್ಸೋವರೆಗೂ ಕಾಯುವ ತಾಳ್ಮೆ ಇರ್ತಿರ್ಲಿಲ್ಲ.

ಆದ್ರೆ ಈಗ ಪತ್ರ ಬರವಣಿಗೆ ಕಡಿಮೆಯಾದ್ರೂ ಎಲ್ಲೋ ಮೂಲೆಯಲ್ಲಿ ಪತ್ರ ಬರೆಯುವವರು ಇನ್ನೂ ಕೆಲವೊಬ್ರು ಸಿಗ್ತಾರೆ ಅನ್ನೋದೇ ಸಣ್ಣ ಖುಷಿ.

ನಿಮ್ಗೂ ಪತ್ರ ಬರೆಯೋ ಆಸಕ್ತಿ ಇದ್ರೆ ಖಂಡಿತಾ ಇಲ್ನೋಡಿ… ಅಂಚೆ ಇಲಾಖೆಯವ್ರು ನಿಮ್ಮನ್ನ ಪ್ರೋತ್ಸಾಹಿಸಲಿಕ್ಕೆ ಅಂತನೇ “ಢಾಯಿ ಆಖರ್” ಅನ್ನೋ ಸ್ಪರ್ಧೆ ಮಾಡ್ತಿದಾರೆ.

“ಬರವಣಿಗೆಯ ಆನಂದ, ಡಿಜಿಟಲ್ ಯುಗದಲ್ಲಿ ಪತ್ರಗಳ ಮಹತ್ವ” ವಿಷಯದ ಕುರಿತು, 500 ಪದದ ಒಳಗಾದರೆ ಇನ್ ಲಾಂಡ್ ಲೆಟರ್ ನಲ್ಲಿ ಅಥವಾ 1000 ಪದ ಮಿತಿಯಲ್ಲಾದರೆ ಎ4 ಹಾಳೆಯಲ್ಲಿ ಬರೆದು ಪೋಸ್ಟ್ ಕವರ್ ನಲ್ಲಿ ನಿಮ್ನ ಊರಿನ ಪೋಸ್ಟ್ ಆಫೀಸ್ ನಲ್ಲಿ ಹೋಗಿ ವಿಳಾಸ ತಿಳಿದುಕೊಂಡು ಪೋಸ್ಟ್ ಮಾಡಬೇಕು. ನೆನಪಿರಲಿ ನಿಮ್ಮ ಬರವಣಿಗೆ ಬೇರೆಲ್ಲೂ ಬಂದಿರಬಾರದು ಅಂತರ್ಜಾಲದಿಂದ ನಕಲು ಮಾಡಿದಂತಹ ವಿಷಯ ಆಗಿರಬಾರದು.

ಕನ್ನಡ, ಇಂಗ್ಲಿಷ್, ಹಿಂದಿ ಯಾವುದೇ ಭಾಷೆಯಲ್ಲಿ ಬರೆದ ಪತ್ರಗಳನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಪರಿಗಣಿಸಿ 50000 ದವರೆಗೂ ಬಹುಮಾನ ನೀಡಲು ತಯಾರಾಗಿದೆ ಅಂಚೆ ಇಲಾಖೆ.

18 ವರ್ಷ ಕೆಳಗಿನವರು ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಎರಡು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದ್ದು, ಡಿಸೆಂಬರ್ 14 ಕೊನೆಯ ದಿನವಾಗಿದೆ. ಹಾಗಾಗಿ ತಡ ಮಾಡದೇ ಈ ಕೂಡಲೇ ಪತ್ರ ಬರೆಯಲು‌ ಪ್ರಾರಂಭಿಸಿ. ಪತ್ರ ಬರೆಯುವ ಖುಷಿಯನ್ನು ಮತ್ತೆ ಕಂಡುಕೊಳ್ಳಿ.