ಅಂಕೋಲ ಶಿರೂರು ಗುಡ್ಡ ಕುಸಿತ: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ, ಮೃತರ ಸಂಖ್ಯೆ 8ಕ್ಕೆ ಏರಿಕೆ.

ಅಂಕೋಲ: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂಕುಸಿತ ದುರಂತ ಸಂಭವಿಸಿ ಒಂದು ವಾರ ಕಳೆದಿದ್ದು, ಕಾರ್ಯಾಚರಣೆ ವೇಳೆ ಮತ್ತೊಂದು ಮಹಿಳೆಯ ಶವ ಪತ್ತೆಯಾಗಿದೆ. ಮೃತರಾದ ಹನ್ನೊಂದು ಜನರಲ್ಲಿ ಈವರೆಗೆ ಒಟ್ಟು 8 ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನದ ಮೊರೆಹೋಗಿರುವ ಜಿಲ್ಲಾಡಳಿತ ಇಸ್ರೋ ಜೊತೆಗೆ ಯೋಧರ ನೆರವು ಪಡೆದಿದೆ.

ಮೃತ ಮಹಿಳೆ ಉಳವರೆ ಗ್ರಾಮದ ಸಣ್ಣಿ ಹನುಮಂತ ಗೌಡ (67). ಘಟನೆ ನಡೆದ 8 ದಿನದ ಬಳಿಕ ಶವ ಪತ್ತೆಯಾಗಿದೆ. ಇನ್ನು ಉಳಿದ ಮೂವರಿಗೆ ಶೋಧ ಕಾರ್ಯ ಮುಂದುವರಿದಿದೆ.

ಒಂದೆಡೆ ಬಿಟ್ಟು ಬಿಡದ ಮಳೆ, ಮತ್ತೊಂದೆಡೆ ಪದೇ ಪದೇ ನೆಲಕ್ಕುರುಳುತ್ತಿರುವ ಗುಡ್ಡದ ಮಣ್ಣು. ಇದರ ನಡುವೆ ರಕ್ಷಣಾ ತಂಡ ಜೀವ ಪಣಕ್ಕಿಟ್ಟು ಕಾರ್ಯಾಚರಣೆ ಮಾಡುತ್ತಿದೆ. ಇನ್ನೂ ಉಳಿದವರಿಗೆ ಶಂಕಿತ ಸ್ಥಳದಲ್ಲಿ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್‌ಗಳು ಮಾತ್ರ ಪತ್ತೆಯಾಗಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಆರ್ಮಿ ಕಮಾಂಡೋಗಳ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.

ಜುಲೈ 16ರ ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತವಾಯಿತು. ಈ ದುರಂತದಲ್ಲಿ 11 ಮಂದಿ ಬಲಿಯಾಗಿದ್ದಾರೆ. ಅವರಲ್ಲಿ ಈವರೆಗೆ 8 ಮೃತದೇಹಗಳು ಪತ್ತೆಯಾಗಿವೆ. ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.