ಕಾರವಾರ: ಅಂಕೋಲ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರೂರು ಕ್ಯಾಂಟೀನ್ ಮಾಲೀಕನ ಐದು ವರ್ಷದ ಮಗಳ ಮೃತದೇಹ ಪತ್ತೆಯಾಗಿದೆ.
ಮೃತ ಬಾಲಕಿಯನ್ನು ಆವಂತಿಕ (5) ಎಂದು ಗುರುತಿಸಲಾಗಿದೆ. ಗಂಗಾವಳಿ ನದಿಯಲ್ಲಿ ತೇಲಿ ಹೋಗಿ ಗೋಕರ್ಣ ಬ್ರಿಡ್ಜ್ ಬಳಿ ಆವಂತಿಕ ಮೃತದೇಹ ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡ ಕುಸಿದು 20ಕ್ಕೂ ಹೆಚ್ಚು ಜನರು ಮೃತ ಆಗಿರುವ ಬಗ್ಗೆ ಶಂಕೆ ವ್ಯಕ್ತ ಆಗುವುದರ ಜೊತೆಗೆ ಇನ್ನಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಘಟನಾ ಸ್ಥಳಕ್ಕೆ ತಜ್ಞರು ಭೇಟಿ ನೀಡಲಿದ್ದಾರೆ. ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ ತಜ್ಞ ಸಂಜೀವ್ ಎಂಬವರು ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಗುಡ್ಡ ಕುಸಿತ ಆಗಿರುವ ಬಗ್ಗೆ ಬಹಳಷ್ಟು ಚರ್ಚೆ ಆಗುತ್ತಿದೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿದ್ದರಿಂದ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಭೂ ಕುಸಿತದ ಬಗ್ಗೆ ಅಧ್ಯಯನ ಮಾಡಲಿದೆ.