ಹೊಸದಿಲ್ಲಿ: ತೆರಿಗೆ ಮಿತಿ ಹೆಚ್ಚಳದಿಂದ, 1 ಕೋಟಿ ಜನರಿಗೆ ಅನುಕೂಲವಾಗಿದೆ: ನಿರ್ಮಲಾ ಸೀತಾರಾಮನ್‌ ಹೇಳಿಕೆ.

ಹೊಸದಿಲ್ಲಿ: ಆದಾಯ ತೆರಿಗೆ ವಿನಾಯ್ತಿ ಮಿತಿ12ಲಕ್ಷ ರೂ. ಗೆ ಏರಿಸಿರುವುದು “ಜನರ ಧ್ವನಿಗೆ ನೀಡಿರುವ ಸ್ಪಂದನೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಬಣ್ಣಿಸಿದ್ದಾರೆ.

ಬಜೆಟ್‌ ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ಮಂಡಿಸಿದ ಆಯವ್ಯಯಕ್ಕೆ ಸಂಬಂಧಿಸಿ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಆದಾಯ ತೆರಿಗೆ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿರುವ ಕಾರಣ ಸರಿಸುಮಾರು 1 ಕೋಟಿ ತೆರಿಗೆದಾರರಿಗೆ ಅನುಕೂಲವಾಗಲಿದ್ದು, ರಿಬೇಟ್‌ ಹೆಚ್ಚಳದಿಂದಾಗಿ ಇವರೆಲ್ಲರೂ ಇನ್ನು ಮುಂದೆ ಆದಾಯ ತೆರಿಗೆ ಪಾವತಿಸಬೇಕಾಗಿರುವುದಿಲ್ಲ ಎಂದಿದ್ದಾರೆ.ನಮ್ಮದು ಸಕಾರಾತ್ಮಕವಾಗಿ ಸ್ಪಂದಿಸುವ ಸರಕಾರ. ನಾವು ಕಳೆದ ಜುಲೈನಲ್ಲಿ ಘೋಷಿಸಿದ್ದ ಆದಾಯ ತೆರಿಗೆ ಸರಳೀಕರಣವನ್ನು ಪೂರ್ಣಗೊಳಿಸಿರುವುದೇ ಇದಕ್ಕೆ ಸಾಕ್ಷಿ ಎಂದೂ ನಿರ್ಮಲಾ ಹೇಳಿದ್ದಾರೆ. ಮುಂದಿನ ವಾರವೇ ಹೊಸ ಆದಾಯ ತೆರಿಗೆ ವಿಧೇಯಕವನ್ನು ಸಂಸತ್‌ನಲ್ಲಿ ಮಂಡಿಸಲಾಗುವುದು.

ಶಾಸನಾತ್ಮಕ ಪ್ರಕ್ರಿಯೆಯ ಮೂಲಕವೇ ಅದನ್ನು ಅಂಗೀಕರಿಸಲಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ, ಆದಾಯ ತೆರಿಗೆಯನ್ನು ನಾವು ಹೆಚ್ಚು ಸುಲಭ ಹಾಗೂ ಸರಳೀಕೃತವಾಗಿಸಲಿದ್ದೇವೆ. ವಿನಾಯ್ತಿಗಳನ್ನು ರದ್ದು ಮಾಡಲಿದ್ದೇವೆ ಎಂದೂ ತಿಳಿಸಿದ್ದಾರೆ.

ಜನವರಿಯಲ್ಲಿ 1.96 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ
ಹೊಸದಿಲ್ಲಿ: ದೇಶೀಯ ಆರ್ಥಿಕ ಚಟುವಟಿಕೆ ಹೆಚ್ಚಳಗೊಂಡ ಪರಿಣಾಮ ಜನವರಿ ತಿಂಗಳ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಶೇ. 12.3ರಷ್ಟು ಹೆಚ್ಚಳವಾಗಿ 1.96 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಕೇಂದ್ರ ಸರಕಾರ ಶನಿವಾರ ಬಿಡುಗಡೆ ಮಾಡಿದ ದತ್ತಾಂಶ ಹೇಳಿದೆ.

ದೇಶೀಯವಾಗಿ ಸರಕು ಮತ್ತು ಸೇವೆಗಳ ಮಾರಾಟದಿಂದ ಬಂದ ಆದಾಯವು ಶೇ. 10.4 ಏರಿಕೆಯಾಗಿ 1.47 ಲಕ್ಷ ಕೋಟಿ ರೂ. ಆಗಿದೆ. ಆಮದು ಮಾಡಲಾದ ಸರಕುಗಳಿಂದ ಬಂದ ತೆರಿಗೆ ಆದಾಯವು ಶೇ. 19.8 ಏರಿಕೆಯಾಗಿ 48,382 ಕೋಟಿ ರೂ.ಗೆ ಏರಿಕೆಯಾಗಿದೆ.