ಹೊಸದಿಲ್ಲಿ:ಗೌತಮ್ ಗಂಭೀರ್ ಗೆ ಬೆದರಿಕೆ ಇ-ಮೇಲ್: ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

ಹೊಸದಿಲ್ಲಿ: ಭಾರತದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮತ್ತು ಮಾಜಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ಬೆದರಿಕೆ ಇ-ಮೇಲ್ ಕಳುಹಿಸಿದ ಹಿನ್ನೆಲೆಯಲ್ಲಿ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿಯನ್ನು ಗುಜರಾತ್ನ ಜಿಗ್ನೇಶ್ ಸಿನ್ಹ ಪರ್ಮಾರ್ ಎಂದು ಗುರುತಿಸಲಾಗಿದ್ದು, ಈತ ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿದ್ದ ಎಂದು ಹೇಳಲಾಗಿದೆ. ಪರ್ಮಾರ್ ಈ ತಿಂಗಳ 22ರಂದು ಅಂದರೆ ಪಹಲ್ಗಾಮ್ ನಲ್ಲಿ ಉಗ್ರಗಾಮಿಗಳು 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ ದಿನವೇ ಗಂಭೀರ್ ಅವರಿಗೆ ಬೆದರಿಕೆ ಮೇಲ್ ಕಳುಹಿಸಿದ್ದಾನೆ.”ಪರ್ಮಾರ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಈತನಿಗೆ ಮಾನಸಿಕ ಸಮಸ್ಯೆಗಳಿವೆ ಎಂದು ಕುಟುಂಬವರು ಹೇಳಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಕೇಂದ್ರ ಡಿಸಿಪಿ ಹರ್ಷವರ್ಧನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಗೌತಮ್ ಗಂಭೀರ್ ಅವರಿಗೆ ಸಂಬಂಧಿಸಿದ ಇ-ಮೇಲ್ ಐಡಿಗೆ ಬೆದರಿಕೆ ಮೇಲ್ ಬಂದಿದೆ ಎಂಬ ಮಾಹಿತಿ ಇರುವುದಾಗಿ ಪೊಲೀಸರು ಪ್ರಕಟಿಸಿದ್ದರು. ಈ ಸಂಬಂಧ ರಾಜೀಂದರ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬೆದರಿಕೆ ಇ-ಮೇಲ್ನ ಸ್ಕ್ರೀನ್ ಶಾಟ್ ಅನ್ನು ಪುರಾವೆಯಾಗಿ ಒದಗಿಸಲಾಗಿದೆ.

ಗಂಭೀರ್ ಅವರಿಗೆ ಎರಡು ಬೆದರಿಕೆ ಮೇಲ್ ಗಳು ಬಂದಿದ್ದು, “ಐ ಕಿಲ್ ಯೂ” ಎಂಬ ಸಂದೇಶ ಕಳುಹಿಸಿದ ವ್ಯಕ್ತಿ “ಐಸಿಸ್ ಕಾಶ್ಮೀರ್” ಎಂದು ಗುರುತಿಸಿಕೊಂಡಿದ್ದಾಗಿ ಪೊಲೀಸರು ವಿವರಿಸಿದ್ದಾರೆ. ಗೌತಮ್ ಗಂಭೀರ್ ಅವರಿಗೆ ಈಗಾಗಲೇ ದೆಹಲಿ ಪೊಲೀಸರಿಂದ ರಕ್ಷಣೆ ಇದ್ದು, ನಿರ್ದಿಷ್ಟ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.