ಹೆಬ್ರಿ: ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ, ಹರಿದಾಸ, ಜಿನದಾಸ, ತಾಳಮದ್ದಳೆ ಅರ್ಥದಾರಿ, ನಾಟಕಕಾರ, ಪ್ರಸಂಗಕರ್ತ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಚಾಣಕ್ಯ ಎಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಹೆಬ್ರಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಹೆಬ್ರಿ ಸರಕಾರಿ ಪ. ಪೂ. ಕಾಲೇಜಿನ ಪ್ರೌಢಶಾಲೆ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕ ಬಹುಮುಖ ಪ್ರತಿಭೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಶಿಕ್ಷಣ ಸಂಸ್ಥೆಯಲ್ಲಿ ಉತ್ತಮವಾದ ಶಿಕ್ಷಕರಿದ್ದರೆ ಸುಸಂಸ್ಕೃತ ಪ್ರಜೆಗಳನ್ನು ಹೊಂದಿದ ರಾಷ್ಟದ ನಿರ್ಮಾಣವಾಗುತ್ತದೆ.ರಾಷ್ಟದ ನಿರ್ಮಾಣವೆಂದರೆ ಕೇವಲ ಗಗನಚುಂಬಿ ಕಟ್ಟಡಗಳ ನಿರ್ಮಾಣವಲ್ಲ. ನಿಜವಾದ ಅರ್ಥದಲ್ಲಿ ರಾಷ್ಟನಿರ್ಮಾಣವೆಂದರೆ ಮೌಲ್ಯಯುತವಾದ ಪ್ರಜೆಗಳ ನಿರ್ಮಾಣವೇ ಆಗಿದೆ. ಈ ಹೊಣೆಯನ್ನು ಹೊತ್ತು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಿಕ್ಷಕರು, ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ಕೊಡೊಯ್ಯುವವರೇ ನಿಜವಾದ ಉತ್ತಮ ಶಿಕ್ಷಕರು.ಒಬ್ಬ ವಿದ್ಯಾರ್ಥಿಯ ಜೀವನಯಾನದ ಬದುಕಿಗೆ ಆದರ್ಶವಾಗಿ, ದಡ ಸೇರಲು ನಾವಿಕನಾಗಿ, ಸನ್ಮಾರ್ಗದ ಚಾಲಕನಾಗಿ, ಅಜ್ಞಾನದ ಕತ್ತಲೆಯಲ್ಲಿ ಬೆಳದಿಂಗಳಾಗಿ, ಜ್ಞಾನದಾಹಿಗಳಿಗೆ ಅಕ್ಷರದಾಸೋಹಿಯಾಗಿ, ಸಾಧನೆಯ ಕಿರೀಟಕ್ಕೆ ಸೂರ್ತಿಯ ನೆಲೆಯಾಗಿ, ಭರವಸೆಯ ಬಾಳಿಗೆ ಮಾಲಕನಾಗಿ, ಆದರ್ಶಕ್ಕೆ ನಾಯಕನಾಗಿ, ನಡೆಯುವವನೇ ಉತ್ತಮ ಶಿಕ್ಷಕ. ಅಂತಹ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡು ಸಭ್ಯ ಸಮಾಜ ನಿರ್ಮಾಣ ಕಾರ್ಯದಲ್ಲಿ ಬಹುಮುಖ ಪ್ರತಿಭೆಯ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಅವರು ತೊಡಗಿಸಿಕೊಂಡಿದ್ದಾರೆ.
ಪ್ರವೀಣ್ ಕುಮಾರ್ ಶೆಟ್ಟಿ ಬಗ್ಗೆ:
ಉಡುಪಿ ತಾಲೂಕು ಕೆಂಜೂರು ಶ್ರೀ ಶ್ರೀಧರ್ ಶೆಟ್ಟಿ ಮತ್ತು ಶ್ರೀಮತಿ ಸರಸ್ವತಿ ಶೆಟ್ಟಿ ದಂಪತಿಯ ಪುತ್ರನಾಗಿ ಜನಿಸಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರು ಎಂಎ/ ಬಿಎಡ್ ಪದವೀಧರರು. ಪ್ರಸ್ತುತ ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಕ್ಕಳಲ್ಲಿ ಅಡಗಿರುವ ಸುಕ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುವುದರ ಜೊತೆಗೆ ಪ್ರೋತ್ಸಾಹ ನೀಡಿ ತರಬೇತಿಯನ್ನು ನೀಡುತ್ತಾ ಮಕ್ಕಳ ಏಳಿಗೆಯಲ್ಲಿ ಸದಾ ತೊಡಗಿಸಿಕೊಂಡಿರುವ ಇವರು ವ್ಯಕ್ತಿತ್ವ ವಿಕಸನ ತರಬೇತಿಯನ್ನು ನೀಡುತ್ತಾ ಮಕ್ಕಳಲ್ಲಿ ವಿವಿಧ ಕೌಶಲ್ಯಗಳನ್ನು ಕರಗತಗೊಳಿಸಿದ ವ್ಯಕ್ತಿದ ಕೈ . ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಜಾನಪದ ಪ್ರಕಾರಗಳ ಕಲೆಗಳನ್ನು ಪ್ರೀತಿಸುತ್ತಾ ಪ್ರತಿಭೆಗಳ ಅನಾವರಣಕ್ಕೆ ವಿವಿಧ ಕಡೆಗಳಲ್ಲಿ ವೇದಿಕೆಯನ್ನ ಒದಗಿಸಿಕೊಡುವಲ್ಲಿ ಇವರ ಶ್ರಮ ಶ್ಲಾಘನೀಯ. ಸಮಯ ಪಾಲನೆ ಪ್ರಾಮಾಣಿಕತೆ ಮತ್ತು ಶಿಸ್ತು ಬದ್ಧ ಜೀವನ ಶೈಲಿಯಿಂದ ಮಾದರಿ ಶಿಕ್ಷಕರಾಗಿ ಗುರುತಿಸಿಕೊಂಡ ಇವರು ಹೆಬ್ರಿ ಜೆಸಿಐ ಅಧ್ಯಕ್ಷರಾಗಿದ್ದು ಕೊಂಡು ಹಲವಾರು ಸಮಾಜಮುಖಿ ಕಾರ್ಯದ ಜೊತೆಗೆ ಉತ್ತಮ ಸಂಘಟಕರಾಗಿ ತರಬೇತುದರಾಗಿ ಕಾರ್ಯಕಮ ನಿರೂಪಕರಾಗಿ ಸಂಪನ್ಮೂಲ ಶಿಕ್ಷಕರಾಗಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಜನಮನ್ನಣೆ ಗಳಿಸಿದ್ದಾರೆ.ಶಿಕ್ಷಣದ ಜೊತೆ ಎಲ್ಲಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರ ಶೈಕ್ಷಣಿಕ ಸಾಹಿತ್ಯ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ರಂಗದಲ್ಲಿನ ಅಮೂಲ್ಯ ಸೇವೆಯನ್ನು ಗುರುತಿಸಿ ಈ ಬಾರಿ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಉತ್ತಮ ಶಿಕ್ಷಕ, ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿ ಕೊಂಡ ಇವರು ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಶ್ಯೆಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದಲ್ಲಿ ಮಿಂಚುತ್ತಿರುವ ಇವರ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆಯು ಸೇರಿ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಗೌರವ, ಅಭಿನಂದನೆಗಳನ್ನು ಪಡೆದಿದ್ದಾರೆ.
ಅಂಬಾತನಯರ ನೆನಪಿನಲ್ಲಿ ಪ್ರಶಸ್ತಿ :
ಚಾಣಕ್ಯ ಸಂಸ್ಥೆ ಕಳೆದ 10 ವರ್ಷಗಳಿಂದ ಶಿಕ್ಷಣ ಮಾತ್ರವಲ್ಲದೆ ವಿವಿಧ ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿವಿಧ ವೇದಿಕೆಗಳಲ್ಲಿ ಆವಕಾಶ ಕಲ್ಪಿಸುವುದರ ಜತೆಗೆ ಪತ್ರಿಕೆ ಹಾಗೂ ಟಿ.ವಿ.ಮಾಧ್ಯಮಗಳಲ್ಲಿ ಪ್ರತಿಭೆಯ ಅನಾವರಣ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಚಾಣಕ್ಯ ಸಂಸ್ಥೆ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣದ ಜತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಕೊಂಡು ಮಕ್ಕಳ ಪ್ರತಿಭೆಯನ್ನು ಹೊರತರುವಲ್ಲಿ ಶ್ರಮಿಸುತ್ತಿರುವ ಉಡುಪಿ ಜಿಲ್ಲೆಯ ಶಿಕ್ಷಕರನ್ನು ಕಳೆದ ವರ್ಷದಿಂದ ಗುರುತಿಸಿ ಶಿಕ್ಷಣದ ಜತೆ ಸಾಂಸ್ಕೃತಿಕ, ಸಾಹಿತ್ಯ, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ಹೆಸರಾಂತ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ನೆನಪಿನಲ್ಲಿ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಪ್ರಶಸ್ತಿ ಪ್ರಧಾನ ಸಮಾರಂಭ : ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಸೆ.5ರಂದು ಸಂಜೆ 4ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದ್ದು ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಸನತ್ ಕುಮಾರ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ವೀಣಾ ಯು.ಶೆಟ್ಟಿ ವಹಿಸಲಿದ್ದು ಚಾರ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಸುನೀಲ್ ಕುಮಾರ್, ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ,ನೇತಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ
ಸಂತೋಷ್ ಪೂಜಾರಿ ಬಲ್ಲಾಡಿ ಜೇಸಿಐ ಅಧ್ಯಕ್ಷೆ
ರಕ್ಷಿತಾ ಪುಟ್ಟಣ್ಣ ಭಟ್, ಪೂರ್ವಧ್ಯಕ್ಷ ಪ್ರಶಾಂತ ಪೈ ಮೊದಲಾದವರು ಭಾಗವಹಿಸಲಿದ್ದಾರೆ.