ಹೆಬ್ರಿ: ಬೈಕ್’ಗಳು ಮುಖಾಮುಖಿ ಡಿಕ್ಕಿ – ಸವಾರ ಸ್ಥಳದಲ್ಲೇ ಮೃತ್ಯು.

ಹೆಬ್ರಿ: ಬೈಕ್ ಸವಾರನೋರ್ವನ ಓವರ್ ಟೇಕ್ ಭರದಲ್ಲಿ ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹೆಬ್ರಿ ತಾಲೂಕಿನ ಮುನಿಯಾಲಿನ ಚಟ್ಕಲ್ ಪಾದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಭಾನುವಾರ ಸಂಜೆ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ಬೈಕ್ ಸವಾರ ಅಂಡಾರು ಗ್ರಾಮದ ನಿವಾಸಿ ಭಾಸ್ಕರ ಶೆಟ್ಟಿ (52) ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ಇನ್ನೋರ್ವ ಬೈಕ್ ಸವಾರ ಸಂದೀಪ್ ಎಂಬವರು ತೀವ್ರ ಗಾಯಗೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಸಂದೀಪ್ ಎಂಬವರು ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ತನ್ನ ಬೈಕಿಗೆ ಹೋಗುತ್ತಿದ್ದಾಗ ಚಟ್ಕಲ್ ಪಾದೆ ಎಂಬಲ್ಲಿ ಮುಂದಿನಿಂದ ಹೋಗುತ್ತಿದ್ದ ವಾಹನ ಓವರ್ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಭಾಸ್ಕರ ಶೆಟ್ಟಿ ಚಲಾಯಿಸಿಕೊಂಡು ಬರುತ್ತಿದ್ದ ಬೈಕಿಗೆ ಡಿಕ್ಕಿಯಾದ ಪರಿಣಾಮ ಭಾಸ್ಕರ ಶೆಟ್ಟಿ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡು ದಾರುಣವಾಗಿ ಮೃತಪಟ್ಟಿದ್ದಾರೆ‌.

ಈ ಭಾಗದ ರಸ್ತೆ ಅಗಲೀಕರಣಗೊಂಡ ಪರಿಣಾಮ ವಾಹನಗಳು ಅತಿಯಾದ ವೇಗದಲ್ಲಿ ಚಲಿಸುತ್ತಿರುವ ಪರಿಣಾಮ ಅಪಘಾತಗಳು ಹೆಚ್ಚುತ್ತಿವೆ. ಬೈಕ್ ಸವಾರ ಸಂದೀಪ್ ಎಂಬಾತನ ಧಾವಂತದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.