ಗುಜರಾತ್: ಗುಜರಾತ್ನ ಪಟಾನ್ ಜಿಲ್ಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ರ್ಯಾಗಿಂಗ್ಗೆ ವೈದ್ಯಕೀಯ ವಿದ್ಯಾರ್ಥಿ ಬಲಿಯಾದ ಘಟನೆ ಶನಿವಾರ (ನ.16) ನಡೆದಿದೆ. ಸುಮಾರು ಮೂರು ಗಂಟೆಗಳ ಕಾಲ ಒಂದೇ ಕಡೆ ನಿಂತಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪಟಾನ್ ಜಿಲ್ಲೆಯ ಧಾರಾಪುರದ ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೊದಲ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಅನಿಲ್ ಮೆಥಾನಿಯಾ ಮೃತ ವಿದ್ಯಾರ್ಥಿ.
ಹಿರಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್:
ಈತನನ್ನು ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ಒಂದೇ ಕಡೆ ನಿಲ್ಲಿಸಿದ್ದಾರೆ. ಈ ವೇಳೆ ಅನಿಲ್ ಮೆಥಾನಿಯಾ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಪ್ರಜ್ಞಾಹೀನನಾಗಿ ಬಿದ್ದಿದ್ದ ಅನಿಲ್ ಮೆಥಾನಿಯಾ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಆದರೆ, ಅನಿಲ್ ಸಾಯುವ ಮುನ್ನ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದು, “ನನ್ನನ್ನು ಮೂರು ಗಂಟೆಗಳ ಕಾಲ ನಿಲ್ಲಿಸಿ, ಹಿಂಸೆ ನೀಡಿದ್ದಾರೆ” ಎಂದು ಅನಿಲ್ ಹೇಳಿದ್ದಾಗಿ ವರದಿಯಾಗಿದೆ.
ಅನಿಲ್ ಅವರನ್ನು ಹಿರಿಯ ವಿದ್ಯಾರ್ಥಿಗಳು ಮೂರು ಗಂಟೆಗಳ ಕಾಲ ನಿಲ್ಲಿಸಿ, ಕಿರುಕುಳ ನೀಡಿದ್ದಾರೆ. ಈ ವೇಳೆ ಆತ ಕುಸಿದು ಬಿದ್ದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
“ಅನಿಲ್ ಕುಸಿದು ಬಿದ್ದ ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ದಾಖಲಿಸಿದೆವು. ಸಾಯುವ ಮುನ್ನ ಅವರು “ಹಿರಿಯ ವಿದ್ಯಾರ್ಥಿಗಳು ರ್ಯಾಗ್ ಮಾಡಿ ಮೂರು ಗಂಟೆಗಳ ಕಾಲ ನಿಲ್ಲಿಸಿದ ವಿಷಯ ಪೊಲೀಸರು ತಿಳಿಸಿದ್ದಾರೆ. ನಾವು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದೇವೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ವೈದ್ಯಕೀಯ ಕಾಲೇಜಿನ ಡೀನ್ ಹಾರ್ದಿಕ್ ಶಾ ಹೇಳಿದ್ದಾರೆ.
“ವಿದ್ಯಾರ್ಥಿಯ ತಂದೆ ದೂರು ದಾಖಲಿಸಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆಯ ಕುರಿತು ವರದಿ ಸಲ್ಲಿಸಲು ವೈದ್ಯಕೀಯ ತಂಡವನ್ನು ಕೇಳಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಕೆ.ಕೆ.ಪಾಂಡ್ಯ ತಿಳಿಸಿದ್ದಾರೆ.