ಸ್ವ-ಉದ್ಯೋಗಕ್ಕೆ ಮಹಿಳೆ ಒಲವು ತೋರಿದರೆ ಅದೇ ಗೆಲುವು: ಉಡುಪಿಯಲ್ಲಿ ಪವರ್ ಪರ್ಬದಲ್ಲಿ ಅಂಡಾರು ದೇವಿಪ್ರಸಾದ್ ಶೆಟ್ಟಿ

ಉಡುಪಿ: ಮಹಿಳೆಯರ ವಿದ್ಯಾಭ್ಯಾಸಕ್ಕೆ ತಕ್ಕಂತಹ ಪ್ರತಿಫಲ ಜಿಲ್ಲೆಯಲ್ಲಿ ಸಿಗುವಂತಾಗಬೇಕು. ಸ್ವ ಉದ್ಯೋಗದ ಬಗ್ಗೆ ಮಹಿಳೆಯರು ಹೆಚ್ಚಿನ ಒಲವು ತೋರಿಸಿ ಮಾದರಿಯಾಗಬೇಕು. ಇದರಿಂದ ಯಶಸ್ಸು ಕಂಡುಕೊಳ್ಳಲು ಸಾಧ್ಯವಿದೆ ಎಂದು ಎಫ್‌ಕೆಸಿಸಿಐ ನಿರ್ದೇಶಕ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಹೇಳಿದರು.

ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ (ಫ್ಲ್ಯಾಟ್‌ಫಾರಂ ಆಫ್ ವುಮನ್ ಎಂಟರ್‌ಪ್ರೆನ್ಯೂರ್) ಆಶ್ರಯದಲ್ಲಿ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್, ಮೈದಾನದಲ್ಲಿ ನಡೆಯುತ್ತಿರುವ ‘ಪವರ್’ ಪರ್ಬ-2025’ರಲ್ಲಿ ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳಾ ಉದ್ದಿಮೆದಾರರನ್ನು ಪವರ್ ಸಂಘಟನೆಯ ಮೂಲಕ ಒಗ್ಗೂಡಿಸುವುದೇ ಸವಾಲಿನ ಕೆಲಸವಾಗಿದೆ. ಮನೆ, ವ್ಯವಹಾರದ ನಡುವೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮತ್ತಷ್ಟು ಉದ್ದಿಮೆದಾರರನ್ನು ಗುರುತಿಸಿದಂತಾಗುತ್ತದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಮತ್ತಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ. ಮಹಿಳಾ ಉದ್ದಿಮೆದಾರರಿಗೆ ಸಾಲ ನೀಡುವ ಸಂದರ್ಭದಲ್ಲಿಯೂ ಸೂಕ್ತ ಬೆಂಬಲ ನೀಡುವ ಕೆಲಸವಾಗಬೇಕು ಎಂದರು.

ಯುಸಿಸಿಐ ಉಪಾಧ್ಯಕ್ಷ ನಟರಾಜ್, ಡಿಎಸ್‌ಐಎ ಅಧ್ಯಕ್ಷ ಹರೀಶ್ ಕುಂದರ್,ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಉಡುಪಿ ಕಾರ್ಸ್ ಮಾಲಕ ಮೊಹಮ್ಮದ್ ಅಶ್ರಫ್, ಬಿಎನ್‌ಐ ನಿದೇಶಕ ಗಣೇಶ್‌ ಶರ್ಮ,ಟೋಸ್ಟ್ ಮಾಸ್ಟರ್ಸ್ನ ಜಿಲ್ಲಾ ನಿರ್ದೇಶಕಿ ಸವಿತಾ ಸಾಲಿನ್ಸ್ ಸಂಘಟನಾ ಸಂಯೋಜಕಿ ಸುಗುಣ ಸುವರ್ಣ, ಪವರ್ ಪದಾಧಿಕಾರಿಗಳಾದ ಸುಜಯ ಶೆಟ್ಟಿ, ರೇಶ್ಮಾ ತೋಟ, ನಿಮಿತಾ ಸತೀಶ್ ಚಂದ್ರ, ಜೆನಿಫರ್ ಸಪ್ನ ಸಾಲಿನ್ಸ್, ಸುಪ್ರಿಯಾ ಕಾಮತ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು. ಪವರ್‌ ಅಧ್ಯಕ್ಷೆ ತನುಜಾ ಮಾಬೆನ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷೆ ರೇಣು ಜಯರಾಮ್ ವಂದಿಸಿದರು. ಡಾ| ಯು.ಬಿ.ಶಬರಿ ಹಾಗೂ ವೀಣಾ ಶೆಟ್ಟಿ ನಿರೂಪಿಸಿದರು.