ಸ್ವಾತಂತ್ರ್ಯಕ್ಕಾಗಿ‌ ಮಡಿದ ಹೋರಾಟಗಾರರನ್ನು ಸ್ಮರಿಸೋಣ: ಚೈತನ್ಯ ಕೋಟ್ಯಾನ್ ಬರೆದ ಸ್ವಾತಂತ್ರ್ಯೋತ್ಸವದ ಬರಹ.

ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡಲು ಸಾವಿರಕ್ಕೂ ಹೆಚ್ಚಿನ ಗಣ್ಯ ವ್ಯಕ್ತಿಗಳು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಸ್ವಾತಂತ್ರ್ಯವನ್ನು ತಂದು ಕೊಟ್ಟು 78 ವರ್ಷಗಳು ಸಂದಿವೆ. ಆ ಗಣ್ಯ ವ್ಯಕ್ತಿಗಳನ್ನು ನೆನೆಯುತ್ತ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.

ಆಗಸ್ಟ್ 15 ಬಂದರೆ ಸಾಕು. ತಟ್ಟನೆ ನೆನಪಾಗುವುದು ಶಾಲಾದಿನಗಳಲ್ಲಿ ನಾವು ಆಚರಿಸುತ್ತಿದ್ದ ಆಚರಣೆ. ಸ್ವಾತಂತ್ರ್ಯ ದಿನದಂದು ಶಾಲೆಯ ಹೊಸ ಯುನಿಫಾರ್ಮ್ ಧರಿಸಿ ಶಾಲೆಗೆ ಹೋಗುವುದೇ ಒಂದು ಚಂದ. ಆ ದಿನಗಳಲ್ಲಿ ಸ್ವಾತಂತ್ರ್ಯ ದಿನದ ಮಹತ್ವ ಅಷ್ಟಾಗಿ ತಿಳಿದಿರಲ್ಲಿಲ್ಲ. ಆದರೂ ಸ್ವಾತಂತ್ರ್ಯ ದಿನದಂದು ಖುಷಿ ನೀಡುತ್ತಿದ್ದ ವಿಷಯವೆಂದರೆ ಬ್ಯಾಗ್ ಇಲ್ಲದೆ ಶಾಲೆಗೆ ಹೋಗುವುದು ಒಂದು ಕಡೆ ಆದರೆ ಚಾಕಲೇಟ್ ಹಾಗೂ ಇತರ ಸಿಹಿತಿಂಡಿಗಳನ್ನು ಆ ದಿನ ಕೊಡುತ್ತಾರೆ ಎಂಬುದೇ ಖುಷಿ.

ಶಾಲೆಯ ನೀಲಿ ನೀಲಿ ಯುನಿಫಾರ್ಮ್ ತೊಟ್ಟು ಧ್ವಜಾರೋಹಣದ ಸಮಯದಲ್ಲಿ ಸಾಲಾಗಿ ನಿಂತು ನಾಡಗೀತೆ, ರಾಷ್ಟಗೀತೆ ಹಾಡುವುದು ನಂತರ ಅಥಿತಿಗಳ ಭಾಷಣ ಇವೆಲ್ಲ ಯಾವಾಗ ಮುಗಿಯುದೋ, ಯಾವಾಗ ಸಿಹಿತಿಂಡಿಗಳನ್ನು ನೀಡುತ್ತಾರೋ ಎಂದು ಆ ಕಡೆಯೆ ಕಣ್ಣಾಡಿಸುತ್ತಿದ್ದೆವು. ಇವೆಲ್ಲಾ ಮರೆಯಲಾಗದಂತಹ ಒಂದು ಸುಂದರವಾದ ಕ್ಷಣಗಳು.

ಇನ್ನು ಸ್ವಾತಂತ್ರ್ಯ ಎಂದ ಕೂಡಲೇ ನೆನಪಾಗುವುದೇ ಮಹಾತ್ಮಾ ಗಾಂಧೀಜಿ. ಆದರೆ ಅವರೊಬ್ಬರಿಂದ ಮಾತ್ರ ನಮಗೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿಲ್ಲ ಅವರಂತ ಸಾವಿರಾರು ನಾಯಕರು ಈ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆ ಪ್ರತಿಯೊಬ್ಬ ನಾಯಕರನ್ನು ಸಹ ಈ ದಿನದಂದು ಸ್ಮರಿಸಿಕೊಳ್ಳಬೇಕು.

ಪ್ರತಿಯೊಬ್ಬ ನಾಗರಿಕರು ಸ್ವಾತಂತ್ರ್ಯ ದಿನದ ಮಹತ್ವ ತಿಳಿದಿರಬೇಕು ಹಾಗೆಯೇ ಆ ಸಂದರ್ಭದಲ್ಲಿ ಹುತಾತ್ಮರಾದ ರಾಷ್ಟ್ರನಾಯಕರು ಮತ್ತು ಅವರ ತ್ಯಾಗವನ್ನು ಸ್ಮರಿಸಿಕೊಳ್ಳಬೇಕು. ಆ ಪ್ರತಿಯೊಬ್ಬ ನಾಯಕನನ್ನು ನಾವು ನಮ್ಮ ಜೀವನದ ಸ್ಫೂರ್ತಿಯಾಗಿ ನೋಡಬೇಕು ಆಗ ಪ್ರತಿಯೊಬ್ಬ ಪ್ರಜೆಗೂ ನಮ್ಮ ದೇಶದ ಬಗ್ಗೆ ಅಭಿಮಾನ ಹುಟ್ಟುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲೇ ಸ್ವಾತಂತ್ರ್ಯ ದಿನ, ರಾಷ್ಟ್ರ ನಾಯಕರು ಹಾಗೆಯೇ ಪ್ರಜಾಪ್ರಭುತ್ವ ದಿನಗಳ ಬಗ್ಗೆ ಅರಿವು ಮೂಡಿಸಬೇಕು. ಚಿಕ್ಕಂದಿನಿಂದಲೇ ಈ ದಿನಗಳ ಮಹತ್ವ ಅರಿತಾಗ ಆತ ಒಬ್ಬ ಒಳ್ಳೆಯ ಪ್ರಜೆಯಾಗಿ ದೇಶದ ಘನತೆಯನ್ನು ಎತ್ತಿಹಿಡಿಯುತ್ತಾನೆ. ಪ್ರತಿಯೊಬ್ಬ ರಾಷ್ಟ್ರ ನಾಯಕರ ತ್ಯಾಗದ ಬಗ್ಗೆ ಅರಿಯಬೇಕು.

ಚೈತನ್ಯ ಕೋಟ್ಯಾನ್, ಶಿರ್ಲಾಲು