ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗೃತೆ ಕ್ರಮ ವಹಸಿ: ಶಾಸಕ ಯಶ್‌ಪಾಲ್ ಸುವರ್ಣ

ಉಡುಪಿ: ಶಾಲೆ, ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಕುರಿತು ಪ್ರಮುಖ ಆದ್ಯತೆ ನೀಡಬೇಕು. ಶಾಲೆಗಳಲ್ಲಿ, ವಲಸೆ ಕಾರ್ಮಿಕರು ಹೆಚ್ಚಾಗಿರುವ ಸ್ಥಳಗಳಲ್ಲಿ, ಮೀನುಗಾರಿಕೆಯ ಪ್ರದೇಶಗಳಲ್ಲಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಕೀಟನಾಶಕ ಸಿಂಪಡಣೆ ಮಾಡುವುದರೊಂದಿಗೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಶ್‌ಪಾಲ್ ಸುವರ್ಣ ಸೂಚನೆ ನೀಡಿದರು.

ಅವರು ಶುಕ್ರವಾರ ನಗರಸಭೆಯ ಕಚೇರಿಯಲ್ಲಿ ಜಿಲ್ಲೆಯಲ್ಲಿ ಸಾಂಕ್ರಮಿಕ ರೋಗಗಳ ತಡೆ ಕುರಿತು ಮುಂಜಾಗೃತಾ ಕ್ರಮದ ಬಗ್ಗೆ ನಗರಸಭೆ ಹಾಗೂ ಆರೋಗ್ಯ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಜಿಲ್ಲೆಗೆ ಹೊರ ರಾಜ್ಯದಿಂದ ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಅವರೊಂದಿಗೆ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಇರುವ ಸಂಭವವಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಗಮನ ಹರಿಸಬೇಕು. ನಗರಸಭಾ ವ್ಯಾಪ್ತಿಯ ಹೋಟೆಲ್, ಲಾಡ್ಜ್ಗಳಲ್ಲಿ ಕಿಟಕಿಗಳಿಗೆ ಕಡ್ಡಾಯವಾಗಿ ಸೊಳ್ಳೆ ಪರದೆ ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಕೊಳೆತ ತರಕಾರಿಗಳ ರಾಶಿ ಇರುವ ಕಾರಣ ಅದು ಸೊಳ್ಳೆಗಳ ಉತ್ಪತ್ತಿಗೆ ಮೂಲ ಕಾರಣವಾಗಿದೆ. ಇಂತಹ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಚತೆಯ ಕುರಿತು ಅರಿವು ಮೂಡಿಸುವ
ಕಾರ್ಯವಾಗಬೇಕು ಎಂದರು. ನಗರದ ಬನ್ನಂಜೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೊಳಚೆ ನೀರನ್ನು ನೇರವಾಗಿ ಒಳಚರಂಡಿಗೆ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗಳ್ಳುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಸೂಚನೆ ನೀಡಿದರು. ನಗರಸಭಾ ವ್ಯಾಪ್ತಿಯಲ್ಲಿರುವ ಕಟ್ಟಡಗಳಲ್ಲಿ ಶುಚಿತ್ವ ಹಾಗೂ ಕಟ್ಟಡದ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಮುಂಜಾಗೃತ ಕ್ರಮ ವಹಿಸಬೇಕು. ಕಟ್ಟಡದ ಪರವಾನಿಗೆ ನವೀಕರಣದ ವೇಳೆ ಸ್ವಚ್ಛತೆ ಕಾಯ್ದುಕೊಳ್ಳುವ ಬಗ್ಗೆ ಷರತ್ತುಗಳನ್ನು ಹಾಕಬೇಕು ಎಂದರು.

ಸಭೆಯಲ್ಲಿ ನಗರಸಭಾ ಪೌರಾಯುಕ್ತ ರಾಯಪ್ಪ, ಪರಿಸರ ಅಭಿಯಂತರ ಸ್ನೇಹ ಕೆಎಸ್, ಪ್ರಭಾರ ಆರೋಗ್ಯ ನಿರೀಕ್ಷಕರಾದ ಮನೋಹರ್, ಸುರೇಂದ್ರ ಹೋಬಳಿದಾರ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಬಿಸಿಎಂ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.