ಸರಸ್ವತಿಯ ಉಗಮ ಸ್ಥಾನದಿಂದ ಅಯೋಧ್ಯೆಗೆ ತೀರ್ಥ ಕಳುಹಿಸಿದ ಗೌಡಪಾದಾಚಾರ್ಯ ಮಠ: ಪಿ.ರಾಮಚಂದ್ರ ಕಾಮತ್ ಅವರಿಂದ ಹಸ್ತಾಂತರ

ಶ್ರೀಮದ್ ಗೌಡಪಾದಾಚಾರ್ಯ ಮಠವು ತನ್ನ ಪರಂಪರೆಯಲ್ಲಿ 77 ನೇ ಸ್ವಾಮೀಜಿಯನ್ನು ಹೊಂದಿರುವ ಭಾರತದ ಅತ್ಯಂತ ಹಳೆಯ ಮಠ ಪರಂಪರೆಯಾಗಿದೆ. ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜರು ದೈವಿಕ ಸಂಪ್ರದಾಯಗಳನ್ನು ಗೌರವಿಸಿ ಹಿಮಾಲಯದಲ್ಲಿರುವ ಗರ್ವಾಲ್ ಉತ್ತರಾಖಂಡದಿಂದ ಸರಸ್ವತಿ ನದಿಯ ಮೂಲದಿಂದ ಪಡೆದ ಮಂಗಳಕರವಾದ ಸರಸ್ವತಿ ನದಿಯ ಶುಭ ಉಗಮ ತೀರ್ಥವನ್ನು ಕಳುಹಿಸಿ ಕೃಪೆ ತೋರಿದ್ದಾರೆ.

ಈ ಅಪರೂಪದ ಮತ್ತು ಪವಿತ್ರ ತೀರ್ಥವನ್ನು ಶ್ರೀ ಸರಸ್ವತಿ ಹೆರಿಟೇಜ್ ಪ್ರತಿಷ್ಠಾನದ ಜಗದೀಶ್ ಗಾಂಧಿಯವರ ಮೂಲಕ ಭಕ್ತಿಯಿಂದ ಸಂಗ್ರಹಿಸಲಾಗಿದೆ. ಪೂಜೆಯ ನಂತರ ಸ್ವಾಮೀಜಿಯವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಅಯೋಧ್ಯೆಗೆ ಈ ಅಮೂಲ್ಯವಾದ ತೀರ್ಥವನ್ನು ತಲುಪಿಸುವ ಜವಾಬ್ದಾರಿಯನ್ನು ಮಠದ ಪಿ.ರಾಮಚಂದ್ರ ಕಾಮತ್ ಅವರಿಗೆ ವಹಿಸಿದ್ದರು. ಅಂತೆಯೇ, ಅಯೋಧ್ಯೆಯಲ್ಲಿ ಕಾಮತ್ ಅವರು ಚಂಪತ್ ರಾಯ್ ಅವರನ್ನು ಭೇಟಿ ಮಾಡಿ ಜ. 12 ರಂದು ಸ್ವಾಮೀಜಿ ಕಳುಹಿಸಿದ ಪತ್ರ ಮತ್ತು ತೀರ್ಥವನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಚಂಪತ್ ರಾಯ್ ಸರಸ್ವತಿ ನದಿಯ ಪವಿತ್ರ ತೀರ್ಥ ಮತ್ತು ಮಠದ ಪರಂಪರೆಗೆ ಮನ್ನಣೆ ನೀಡಿದ್ದಾರೆ.

ಸರಸ್ವತೀ ನದಿಯ ಉಗಮಸ್ಥಾನದಿಂದ ಹುಟ್ಟಿಕೊಂಡಿದ್ದರಿಂದ ಅದರ ಅಪರೂಪತೆ ಗುರುತಿಸಿ ಈ ದೈವಿಕ ಕೊಡುಗೆಯನ್ನು ವಿಎಚ್‌ಪಿ ಕಾರ್ಯದರ್ಶಿ ದಿನೇಶ್ಚಂದ್ರ ಮಿಶ್ರಾ ಅವರು ಸಂಪೂರ್ಣ ಭಕ್ತಿಯಿಂದ ಸ್ವೀಕರಿಸಿದರು.

ಈ ಪವಿತ್ರ ತೀರ್ಥವನ್ನು ಪ್ರಾಣ ಪ್ರತಿಷ್ಠೆಯ ಕ್ಷಣಕ್ಕೆ ಬಳಸುವಂತೆ ವಿನಂತಿಸಲಾಯಿತು.

2024 ರ ಜನವರಿ 22 ರಂದು ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ವಿಧಿವಿಧಾನಗಳು ಸುಗಮವಾಗಿ ನಡೆಯಲು ಭವಾನಿ ಶಂಕರ ದೇವರನ್ನು ವಿಶೇಷವಾಗಿ ಪ್ರಾರ್ಥಿಸಲಾಗಿದೆ ಎಂದು ಶಿವಾನಂದ ಸರಸ್ವತಿ ಸ್ವಾಮೀಜಿಗಳು ಪತ್ರದಲ್ಲಿ ತಿಳಿಸಿದ್ದಾರೆ.