ಸಮಾಜದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಪ್ರತಿಯೊಬ್ಬರೂ ಒತ್ತು ನೀಡಬೇಕು: ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ: ಸಮಾಜದಲ್ಲಿ ಹೆಣ್ಣು ಮಕ್ಕಳು ಜನಿಸಿದಾಗ ಸಂಭ್ರಮ ಪಡುವುದರ ಜೊತೆಗೆ ಅವಳಿಗೆ ಉನ್ನತ ಶಿಕ್ಷಣ ನೀಡಬೇಕೆಂಬುದು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಮುಖ್ಯ ಗುರಿಯಾಗಿದ್ದು, ಇದನ್ನು ಸಕಾರಾತ್ಮಕಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಎಂದು ಶಾಸಕ ಯಶ್ ಪಾಲ್ ಎ ಸುವರ್ಣ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ ಇವರಸಹಯೋಗದೊಂದಿಗೆ ನಡೆದ ಬೇಟಿ ಬಚಾವೋ ಬೇಟಿ ಪಡಾವೋ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದಲ್ಲಿ ಅತೀ ಹೆಚ್ಚು ಗೌರವ ಪಡೆಯುತ್ತಿರುವವರು ಮಹಿಳೆಯರು. ಹೆಣ್ಣುಮಕ್ಕಳಿಗೆ ಪ್ರಥಮವಾಗಿ ಪ್ರಾತಿನಿಧ್ಯ ನೀಡಲಾಗುತ್ತಿದೆ. ಮಹಿಳೆಯರ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ಪಡೆದುಕೊಳ್ಳಬೇಕು ಎಂದರು. ಹೆಣ್ಣುಮಕ್ಕಳು ರಾಜಕೀಯ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಮಹಿಳೆಯರು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರುವುದರೊಂದಿಗೆ ತಾವು ಪುರುಷರಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕು ಎಂದರು. ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದರೂ ಸಹ ಅವರು ಕ್ರಮಿಸುವ ಹಾದಿ ಇನ್ನು ಕೂಡ ಬಹಳಷ್ಟಿದೆ. ಶೇ. 24 ರಷ್ಟು ಹೆಣ್ಣು ಮಕ್ಕಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಶೇ.76 ರಷ್ಟು ಮಂದಿ ಇನ್ನು ಕೂಡ ಉನ್ನತ ಶಿಕ್ಷಣಕ್ಕೆ ತೆರೆದುಕೊಂಡಿಲ್ಲ. ಶೇ.13 ರಷ್ಟು ಮಂದಿ ಹೆಣ್ಣುಮಕ್ಕಳು ಮಾತ್ರ ಐಎಎಸ್ ಪಡೆದಿದ್ದು, ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗಬೇಕು ಎಂದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳೇ ಹೆಣ್ಣು ಮಕ್ಕಳ ಸಾಧನೆಗೆ ಮೈಲುಗಲ್ಲು ಎಂದರು.

ಸರಕಾರ ಜಾರಿಗೆ ತಂದಿರುವ ಯೋಜನೆಗಳು ಹೆಣ್ಣು ಮಕ್ಕಳ ಸಾಧನೆಗೆ ಪೂರಕವಾಗಬೇಕು. ಹೆಣ್ಣು ಮಕ್ಕಳು ತಮ್ಮ ವೈಯಕ್ತಿಕ ಸಮಸ್ಯೆಗಳ ಬಗ್ಗೆ ತಿಳಿಸಿದಾಗ ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸುವ ಕೆಲಸವಾಗಬೇಕು. ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರವಾಗಿದ್ದು, ಮಗು ಹೆಣ್ಣಾಗಲೀ ಅಥವಾ ಗಂಡಾಗಲಿ ಅದನ್ನು ಉಳಿಸುವಂತ ಕೆಲಸಮಾಡಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಪ್ರತಿಯೊಬ್ಬ ಪುರುಷನ ಬದುಕಿನ ಅವಿಭಾಜ್ಯ ಅಂಗ ಮಹಿಳೆ. ಆ ಹೆಣ್ಣು ಮಗುವನ್ನು ಗುರುತಿಸಿ, ಗೌರವಿಸುವ ಸಲುವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ಉಂಟಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವಲ್ಲಿ ಪ್ರತಿಯೊಬ್ಬ ಅಧಿಕಾರಿಗಳ ಹಾಗೂ ಸಾರ್ವಜನಿಕರ ಪಾತ್ರ ಬಹಳ ಮುಖ್ಯ ಎಂದ ಅವರು, ಕಾರ್ಯಕ್ರಮದ ಉದ್ದೇಶವನ್ನು ಅರಿತು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮಹತ್ವ ಮತ್ತು ಮಕ್ಕಳ ಹಕ್ಕುಗಳ ಕುರಿತು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀ ರಾಮ್‌ರಾವ್ ಪ್ರಸವಪೂರ್ವ ಲಿಂಗಪತ್ತೆ ನಿಷೇಧಕಾಯ್ದೆ ಮತ್ತು ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಎಎಸ್‌ಪಿ ಸಿದ್ಧಲಿಂಗಪ್ಪ ಟಿ, ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷ ರೊನಾಲ್ಡ್ ಬಿ ಫುರ್ಟಾಡೋ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಮಕ್ಕಳ ಪೋಷಣಾ ಸಂಸ್ಥೆಗಳು,ಅಂಗವಾಡಿ ಕಾರ್ಯಕರ್ತೆಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ದೀಪಾ ನಿರೂಪಿಸಿ, ಪ್ರಭಾರ ನಿರೂಪಣಾಧಿಕಾರಿ ಅನುರಾಧ ಹಾದಿಮನೆ ವಂದಿಸಿದರು.