ಶಿವಮೊಗ್ಗ: ತರಬೇತಿ ವೇಳೆ ವಿಮಾನದಿಂದ ಕೆಳಗೆ ಹಾರಿದಾಗ ಪ್ಯಾರಾಚೂಟ್ ತೆರೆದುಕೊಳ್ಳದೇ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ ವಾಯುಪಡೆಯ ವಾರೆಂಟ್ ಅಧಿಕಾರಿ ಜಿ.ಎಸ್. ಮಂಜುನಾಥ್ (36) ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್ ಡ್ರಾಪ್ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು. ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರು. ಆದರೆ ವಾರಂಟ್ ಆಫೀಸರ್ ಜಿ.ಎಸ್. ಮಂಜುನಾಥ್ ನಾಪತ್ತೆಯಾಗಿದ್ದರು.
ಶೋಧ ಕಾರ್ಯ ನಡೆಸಿದಾಗ ಸಮೀಪದ ಜಮೀನಿನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಂಜುನಾಥ್ ತಂದೆ ಸುರೇಶ್, ತಾಯಿ ನಾಗರತ್ನ. ಕೃಷಿಕ ಕುಟುಂಬ. ಅವರಿಗೆ ಇಬ್ಬರು ಸಹೋದರಿಯರು, ಒಬ್ಬ ಸಹೋದರ ಇದ್ದಾರೆ.
ಮಂಜುನಾಥ್ ಸಾಗರದಲ್ಲಿ ಪಿಯುಸಿ ಪೂರ್ಣಗೊಳಿಸಿದ್ದರು. ಬಳಿಕ ಭಾರತೀಯ ವಾಯು ಸೇನೆಗೆ ಸೇರಿದ್ದರು. ವೈ ಗ್ರೇಡ್ ಅಧಿಕಾರಿಯಾಗಿದ್ದ ವಾರಂಟ್ ಅಫೀಸರ್ ಮಂಜುನಾಥ್, ಅಸ್ಸಾಂನಲ್ಲಿ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಸ್ಸಾಂ ಮೂಲದ ಯುವತಿಯನ್ನು ಮದುವೆಯಗಿದ್ದರು.
ಘಟನೆ ಬಗ್ಗೆ ಮಂಜುನಾಥ್ ಅವರ ಕುಟುಂಬಕ್ಕೆ ಶುಕ್ರವಾರ ಮಧ್ಯಾಹ್ನ ಮಾಹಿತಿ ನೀಡಲಾಗಿದೆ. ಶನಿವಾರ ತಡರಾತ್ರಿ ಅವರ ಪಾರ್ಥೀವ ಶರೀರ ಹೊಸನಗರಕ್ಕೆ ರವಾನೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.












