ಉಡುಪಿ: ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಶಿವಪಾಡಿ ಹಾಗೂ ಶಿವಪಾಡಿ ವೈಭವ ಆಚರಣಾ ಸಮಿತಿ ವತಿಯಿಂದ “ಶಿವಪಾಡಿ ವೈಭವ” ಯಕ್ಷಗಾನ, ಕೃಷಿ, ಆರೋಗ್ಯ, ಆಹಾರ, ಮನೋರಂಜನೆಯ ಮಹಾಮೇಳವನ್ನು ಇದೇ ಫೆ.22ರಿಂದ 26ರ ವರೆಗೆ ಐದು ದಿನಗಳ ಕಾಲ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದೆ ಎಂದು ಶಿವಪಾಡಿ ವೈಭವ ಆಚರಣಾ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ತಿಳಿಸಿದರು.
ಈ ಕುರಿತು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಫೆ. 22ರಂದು ಸಂಜೆ 4 ಗಂಟೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಹೆ ವಿವಿಯ ಸಹಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಫೆ.22ರಿಂದ 26ರವರೆಗೆ ಯಕ್ಷಗಾನ, ಕೃಷಿ, ಆಹಾರ, ಆರೋಗ್ಯ, ಮನೋರಂಜನೆಯ ಮಹಾಮೇಳ ನಡೆಯಲಿವೆ. ಫೆ.22ರ ಕೃಷಿ ಮೇಳದಲ್ಲಿ 50ಮಂದಿ ಕೃಷಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ಐದು ದಿನದ ಕೃಷಿ ಮೇಳದಲ್ಲಿ ಪ್ರತಿದಿನ ಕೃಷಿ ಗೋಷ್ಠಿ- ವಸ್ತು ಪ್ರದರ್ಶನ ಹಾಗೂ 250ಕ್ಕೂ ಹೆಚ್ಚು ಕೃಷಿ ಮಳಿಗೆಗಳು ಇರಲಿವೆ. ದೇವಳದಲ್ಲಿ ಧಾರ್ಮಿಕ ವೈಭವವೂ ಇರಲಿದ್ದು ಷಣ್ಣಾಳಿಕೇರ ಗಣಯಾಗ, ಮೂಡುಗಣಪತಿ ಸೇವೆ, ದುರ್ಗಾ ಹೋಮ ಶಿವಪಂಚಾಕ್ಷರಿ ಮಹಾಮಂತ್ರ ಹೋಮ, ನಾಗ ದೇವರಿಗೆ ಪವಮಾನ ಕಲಶ, ಮಹಾಶಿವರಾತ್ರಿ ದಿವಸ ಬೆಳಗ್ಗೆಯಿಂದ ಪಂಚಾಮೃತ ಅಭಿಷೇಕ ಪುರಸ್ಪರ, ಮಹಾರಂಗಪೂಜೆ ನೆರವೇರಲಿದೆ ಎಂದು ತಿಳಿಸಿದರು.
ಯಕ್ಷಮೇಳದಲ್ಲಿ ಐದು ದಿನ ರಾತ್ರಿ ವಿವಿಧ ಮೇಳಗಳ ಯಕ್ಷಗಾನ ನಡೆಯಲಿದೆ.
ಫೆ.22ರ ರಾತ್ರಿ 7.30ಕ್ಕೆ ಆಹ್ವಾನಿತ ಅತಿಥಿ ಕಲಾವಿದರಿಂದ ತೆಂಕು- ಬಡಗು ಕೂಡಾಟ ಕಾರ್ತವೀರ್ಯ- ಭಾರ್ಗವ
23ರ ರಾತ್ರಿ 7.30 ಹನುಮಗಿರಿ ಮೇಳದವರಿಂದ (ಕಾಲಮಿತಿ) ಸಾಕೇತ ಸಾಮ್ರಾಜ್ಞ
24ರ ರಾತ್ರಿ 7.30 (ಕಾಲಮಿತಿ) ಶ್ರೀ ಕ್ಷೇತ್ರ ಪೆರ್ಡೂರು ಮೇಳ ಕನಕಾಂಗಿ ಕಲ್ಯಾಣ, ಶಶಿಪ್ರಭಾ ಪರಿಣಯ
25ರ ರಾತ್ರಿ 7.30 (ಕಾಲಮಿತಿ) ಶ್ರೀ ಕ್ಷೇತ್ರ ಪಾವಂಜೆ ಮೇಳ ತ್ರಿಜನ್ಮ ಮೋಕ್ಷ,
26ರ ರಾತ್ರಿ 9.30 ರಿಂದ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಮೇಳ ಮಾಯಾಪುರಿ- ವೀರಮಣಿ ಕಾಳಗ- ಕವಿರತ್ನ ಕಾಳಿದಾಸ ಪ್ರಸಂಗಗಳು ಯಕ್ಷ ಪ್ರೇಕ್ಷಕರ ಮನ ತಣಿಸಲಿವೆ.
ಆಹಾರ ಮೇಳದ ಅಡಿಯಲ್ಲಿ 250ಕ್ಕೂ ಅಧಿಕ ಶುದ್ಧ ದೇಸಿ ಶಾಖಾಹಾರಿ ಖಾದ್ಯ, ತಿಂಡಿ- ತಿನಿಸುಗಳ ಮಳಿಗೆಗಳು ಇರಲಿವೆ. ಕುಟುಂಬ ಪ್ರೇಕ್ಷಕರಿಗಾಗಿ ಮನೋರಂಜನಾ ಮೇಳವೂ ಇರಲಿದ್ದು ಅಮ್ಯೂಸ್‌ಮೆಂಟ್ ಪಾರ್ಕ್ ಗಮನ ಸೆಳೆಯಲಿವೆ. ವಿವಿಧ ಆಸ್ಪತ್ರೆಗಳು ಹಾಗೂ ಕುಟುಂಬ ಆರೋಗ್ಯ ಕಲ್ಯಾಣ ಇಲಾಖೆ ಅಡಿಯಲ್ಲಿ ಆರೋಗ್ಯ ಮೇಳ- ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ, ಉಚಿತ ಯೋಗ ತರಬೇತಿಯನ್ನು ನಡೆಸಲಿವೆ. ಅಲ್ಲದೆ ಪ್ರತಿದಿನ ಸಂಜೆ ಬಹುಬಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿದೆ.
ಫೆ.22 ರ ಮೊದಲ ದಿನ ಮೂರು ಗಂಟೆಯಿಂದ ಭಜನಾ ಸಂಧ್ಯಾ, ಫೆ.23 ರ ಮಧ್ಯಾಹ್ನ 3 ರಿಂದ ಯಕ್ಷಗೀತಂ ಉಡುಪಿ ಇವರಿಂದ ತಾಳೆಮದ್ದಲೆ ಸುಭದ್ರ ಕಲ್ಯಾಣ ಹಾಗು ಅದೇ ದಿನ ಸಂಜೆ 6 ರಿಂದ ಝೀ ಕನ್ನಡ ಖ್ಯಾತಿಯ ಸರಿಗಮಪ ಶರಧಿ ಪಾಟೀಲ್ ಮತ್ತು ತಂಡದವರಿಂದ ಗಾನಶರಧಿ ನಡೆಯಲಿದೆ ಎಂದು ಹೇಳಿದರು.
ಫೆ.24 ರಂದು ಸಾಹಿತ್ಯಗೋಷ್ಠಿ ಕವಿ ಕಂಗಳಲ್ಲಿ ಶಿವತಾಂಡವ ನಡೆಯಲಿದ್ದು, ಕಲ್ಲಚ್ಚು ಪ್ರಕಾಶನ ಮಂಗಳೂರು ಇವರು ಇದನ್ನು ಪ್ರಸ್ತುತ ಪಡಿಸಲಿದ್ದಾರೆ. ಸಂಜೆ 5.30 ರಿಂದ ಕಡಿಯಾಳಿಯ ಪ್ರಶಾಂತ್ ಗ್ರೂಪ್ ಆಫ್ ಡ್ಯಾನ್ಸ್ ಅಕಾಡೆಮಿ ಅವರಿಂದ ನಾಟ್ಯೋತ್ಸವ ನೃತ್ಯ ಕಾರ್ಯಕ್ರಮ ನಡೆಯಲಿದೆ. ಫೆ. 25 ರಂದು ಸಂಜೆ 4.30 ರಿಂದ ಸ್ಥಳೀಯ ಭರತನಾಟ್ಯ ಹಾಗೂ ನೃತ್ಯ ವೈಭವ ಕಾರ್ಯಕ್ರಮವಿದೆ.
ಫೆ.26 ರಂದು ಶಿವರಾತ್ರಿಯ ದಿನ ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ವಿದುಷಿ ಉಷಾ ಹೆಬ್ಬಾರ್ ಸಾರಥ್ಯ ಹಾಗೂ, ಸಂಜೀವ ರತ್ನ ಕಲಾಮಂಡಲ ಸಂಯೋಜನೆಯಲ್ಲಿ ಪಂಚಶತಕಂಠಗಾಯನ ನಡೆಯಲಿದೆ. ರಾತ್ರಿ 7.30ರಿಂದ ಶ್ರೀ ಜಗನ್ನಾಥ ಮ್ಯೂಸಿಕಲ್ ಸ್ಕೂಲ್ ಪಕ್ವಾಜ್ ಮಹೇಶ ವಿಠಲ ಸಾಮಂತ್ ಅವರ ಪಕ್ವಾಜ್ ಡೋಲಕ್ ತಬಲಾ ಜುಗಲ್ಬಂದಿಯಲ್ಲಿ ನೂರು ಜನ ಕಲಾವಿದರು ಏಕಕಾಲದಲ್ಲಿ ನೂರು ಕಲಾವಿದರ ಸಮ್ಮಿಲನದಲ್ಲಿ ಈ ಕಾರ್ಯಕ್ರಮ ಶಿವಪಾಡಿ ವೈಭವದ ಮೆರಗನ್ನು ಹೆಚ್ಚಿಸಲಿದೆ ಎಂದರು.
ದೇವಳದ ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್ ಮಾತನಾಡಿ, ಫೆ.26ರಂದು ಗೃಹಸಚಿವ ಜಿ.ಪರಮೇಶ್ವರ್ ದೇವಳಕ್ಕೆ ಆಗಮಿಸಿ, ಸಂಜೆ 5 ಕ್ಕೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೇವಳದ ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಟ್ರಸ್ಟಿಗಳಾದ ಸತೀಶ್ ಪಾಟೀಲ್, ಶುಭಕರ್ ಸಾಮಂತ್, ಪ್ರಕಾಶ್ ಪ್ರಭು, ಅಶೋಕ್ ಸಾಮಂತ್, ಸಾಂಸ್ಕೃತಿಕ ಕಾರ್ಯದರ್ಶಿ ನಾಗರಾಜ್ ಕಾಮತ್, ಆರೋಗ್ಯ ಮೇಳದ ಉಸ್ತುವಾರಿ ಡಾ.ರೇಷ್ಮಾ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಜುನಾಥ್, ಶಿವಪಾಡಿ ವೈಭವ ಆಚರಣಾ ಸಮಿತಿಯ ಪ್ರ.ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ದೇವಳದ ಅಭಿವೃದ್ಧಿ ಟ್ರಸ್ಟ್‌ನ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಉಪಸ್ಥಿತರಿದ್ದರು.












