ಉಡುಪಿ: ರಾಜ್ಯದ 6 ಮಂದಿ ಪ್ರಮುಖ ನಕ್ಸಲರು ಬುಧವಾರ ಶರಣಾಗತಿ ಆಗಿದ್ದಾರೆ. ಆದರೆ ಕರ್ನಾಟಕದಲ್ಲಿ ತೀವ್ರಗಾಮಿ ನಕ್ಸಲ್ ಚಟುವಟಿಕೆಯ ನಾಯಕ ಎಂದೆನಿಸಿ ಕೊಂಡಿದ್ದ, ಇತ್ತೀಚೆಗೆ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ವಿಕ್ರಂ ಗೌಡ ಶರಣಾಗತಿಗೆ ನಿರಾಕರಿಸಿದ್ದ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
2024ರ ನ. 19ರಂದು ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಹೆಬ್ರಿ ಸಮೀಪದ ಕಾಡಿನಲ್ಲಿ ಎನ್ಕೌಂಟರ್ ಮಾಡಲಾಗಿತ್ತು. ಅದಕ್ಕೂ ಒಂದೂವರೆ ತಿಂಗಳ ಹಿಂದೆ ವಿಕ್ರಂ ಗೌಡನಿಗೆ ಶರಣಾಗುವಂತೆ ಕೆಲವು ಸಂಘಟನೆಗಳು ಹಾಗೂ ಸ್ಥಳೀಯರ ಮೂಲಕ ಮನವೊಲಿಸುವ ಪ್ರಯತ್ನವನ್ನು ಕೂಡ ತನಿಖಾ ಸಂಸ್ಥೆ ಮಾಡಿತ್ತು. ಆದರೆ ಆತ, “ನಮ್ಮ ಹೋರಾಟ ನಂಬಿದ ಜನರಿಗೆ ಮೋಸ ಮಾಡುವುದಿಲ್ಲ. ಶರಣಾದರೆ ನಾನು ನಂಬಿದ ಜನರಿಗೆ ಮೋಸ ಮಾಡಿದಂತೆ’ ಎಂದು ತನ್ನ ಮನವೊಲಿಸಲು ಬಂದಂತಹ ವ್ಯಕ್ತಿಗಳಿಗೆ ಪ್ರತ್ಯುತ್ತರ ನೀಡಿದ್ದಾನೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ವಿಕ್ರಂ ಗೌಡ ಸಂಧಾನಕಾರರ ಜೊತೆ ಮಾತನಾಡಿದ ಆಡಿಯೋ ಡಿಟೇಲ್ಸ್ ಇಲ್ಲಿದೆ:
ನಾವು ಯಾವುದೇ ರಾಜಿಗೆ ಹೋಗುವುದಿಲ್ಲ. ಪಕ್ಷ ಅಥವಾ ಸಂಘಟನೆ ಜತೆ ಹೋಗುವುದಿಲ್ಲ.ರಾಜಿಗೆ ಹೋಗುವೆಂದರೆ ಅರ್ಥ ಏನು?ದುಡಿಯುವ ಜನರಿಗೆ ದ್ರೋಹ ಮಾಡಿ,ದುಡ್ಡು ಮಾಡಲು ಹೋಗುತ್ತೇವೆ ಎಂದರ್ಥ ಅಲ್ಲವೇ?ನಮ್ಮ ಜತೆ ಮಾತುಕತೆಗೆ ಬನ್ನಿ ಎಂದು ಏಕೆ ಕರೆಯುತ್ತಿದ್ದಾರೆ?ಲಕ್ಷ, ಕೋಟಿಗಟ್ಟಲೆ ಕೊಡುತ್ತೇವೆ ಎಂದೂ ಹೇಳುತ್ತಿದ್ದಾರೆ. ಆದರೆ ನಾವು ಒಪ್ಪುವುದಿಲ್ಲ.ನಾವು ರಾಜಿಗೆ ಹೋದರೆ ನಾವು ಯಾವ ಜನಕ್ಕೆ ನಿಮ್ಮೊಂದಿಗೆ ಇರುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದೇವೋ ಅವರಿಗೆ ಮೋಸ ಮಾಡಿದಂತೆ ಆಗುತ್ತದೆ. ಆ ಕೆಲಸವನ್ನು ನಾವು ಮಾಡುವುದಿಲ್ಲ. ಸಿಪಿಐಯವರು ರಾಜಿ ಮಾಡಿಕೊಂಡು ಪಕ್ಷ ಕಟ್ಟಿಕೊಂಡರು,
ಎಲೆಕ್ಷನ್ ಮೂಲಕವೇ ಈ ವ್ಯವಸ್ಥೆಯನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ.ಅದು ಸಾಧ್ಯವೇ?ನಾವು ಕೆಸರು ಗುಂಡಿಗೆ ಬಿದ್ದು ಕೆಸರಾಗಿಲ್ಲ ಎಂದರೆ ನಂಬುತ್ತಾರಾ?ವ್ಯವಸ್ಥೆಯೇ ಒಂದು ಕೊಚ್ಚೆ ಗುಂಡಿ ಎಲೆಕ್ಷನ್ ದಾರಿಯಿಂದ ಬದಲಾಯಿಸಲು ಸಾಧ್ಯವಿಲ್ಲ.ನಮ್ಮ ದೃಷ್ಟಿಕೋನದಲ್ಲಿ ವ್ಯವಸ್ಥೆ ತಲೆಕೆಳಗಾಗಿದೆ ಅದನ್ನು ಸರಿಪಡಿಸಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ
ಒಬ್ಬ ತಾಯಿ ಒಂದು ಮಗುವಿಗೆ ಜನ್ಮ ಕೊಡಬೇಕಾ ದರೆ, ಎಷ್ಟು ನೋವು ಅನುಭವಿಸುತ್ತಾಳೆ ಎಂದು ಆ ತಾಯಿಗೇ ಗೊತ್ತು
ಆ ರೀತಿ ಕಷ್ಟಪಡಬೇಕಿದೆ ವ್ಯವಸ್ಥೆ ಯನ್ನು ಬದಲಾಯಿಸಬೇಕಾದರೆ, ಈಗಾಗಲೇ ನಮ್ಮ ಸುಮಾರು ಹತ್ತಾರು ಸಹಸಂಗಾತಿಗಳನ್ನು ಕಳೆದುಕೊಂಡಿದ್ದೇವೆ ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಸಂಧಾನಕಾರರಲ್ಲಿ ಒಬ್ಬರು, “ನೀವು ಇಷ್ಟೆಲ್ಲ ಕಷ್ಟ ಪಡುತ್ತೀರಿ. ನಿಮಗೆ ನೇರವಾಗಿ ಕೇಳುತ್ತೇನೆ, ಖರ್ಚು ವೆಚ್ಚವನ್ನು ಯಾರಿಂದ ಮಾಡಿಸುತ್ತಾರೆ’ ಎಂದು ಕೇಳಿದ್ದಾರೆ. ಅದಕ್ಕೆ ವಿಕ್ರಂ ಗೌಡ, “ಸಂಘಟನೆಯಿಂದ ಮಾಡುತ್ತೇವೆ. ನಮ್ಮ ಹೋರಾಟ ಜಾಸ್ತಿ ಇರುವ ಕಡೆ, ಅಂದರೆ ಪಶ್ಚಿಮ ಬಂಗಾಲ ಸೇರಿ ಕೆಲವೆಡೆ ಲಕ್ಷಾಂತರ ಮಂದಿಗೆ ಭೂಮಿಯನ್ನು ಹಂಚಿದ್ದೇವೆ’ ಎಂದು ಉತ್ತರ ನೀಡಿರುವುದು ಆಡಿಯೋದಲ್ಲಿ ದಾಖಲಾಗಿದೆ.