“ವೈದ್ಯೋ ನಾರಾಯಾಣ ಹರಿ”: ಇಂದು ರಾಷ್ಟ್ರೀಯ ವೈದ್ಯರ ದಿನದ ಆಚರಣೆ.

ವರ್ಷಂಪ್ರತೀ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ 1991 ರಲ್ಲಿ ಮೊದಲ ಬಾರಿ ವೈದ್ಯರ ದಿನವನ್ನು ಆಚರಿಸಲಾಯಿತು.

ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಇದು ಅಷ್ಟೇ ಸತ್ಯವೂ ಕೂಡ. ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಮದ್ದು ನೀಡಿ, ಗುಣ ಪಡಿಸುವುದು ವೈದ್ಯರ ಕರ್ತವ್ಯವಾಗಿದೆ. ವೈದ್ಯೋ ನಾರಾಯಾಣ ಹರಿ ಎನ್ನುವುದು ಅದಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿ ವೈದ್ಯರನ್ನ ದೇವರಿಗೆ ಹೊಲಿಸಲಾಗುತ್ತದೆ. ಈ ಪದ್ಧತಿಯೂ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅನಾರೋಗ್ಯಕ್ಕೆ ತುತ್ತಾದ ಪ್ರತಿಯೋಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವನಿಗೆ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕಾಯಕವಾದರೆ. ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಪುನರ್ಜನ್ಮ ನೀಡುವ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನ ಆಚರಿಸಲಾಗುತ್ತದೆ.

ವೈದ್ಯರ ದಿನವನ್ನು ಭಾರತದಲ್ಲಿ 1991 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ವೈದ್ಯ ಬಿಧನ್ ಚಂದ್ರ ರಾಯ್ ನೀಡಿರುವ ಕೊಡುಗೆ ಪರಿಗಣಿಸಿ, ಅವರ ಜ್ಞಾಪಕಾರ್ಥವಾಗಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯ ದಿನವಾಗಿ ಆಚರಿಸಲು ತೀರ್ಮಾನಿಸಲಾಯಿತು. ಬಿಧನ್ ಚಂದ್ರ ರಾಯ್ ಅವರು ಮೆಡಿಕಲ್ ಕೌನ್ಸಿಲ್ ಆಫ್‌ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್‌ ಅಸೋಸಿಯೇಷನ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ಧರು. ಈ ಹಿನ್ನಲೆಯಲ್ಲಿ ಅವರ ಜನ್ಮ ದಿನ ಮತ್ತು ಪುಣ್ಯಸ್ಮರಣೆ ದಿನವನ್ನೇ ರಾಷ್ಟ್ರೀಯ ವೈದ್ಯಕೀಯ ದಿನ ಎಂದು ಘೋಷಿಸಲಾಯಿತು.

ಪ್ರತಿ ವರ್ಷ ಭಾರತೀಯ ವೈದ್ಯಕೀಯ ಸಂಘವು, ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಯೋಜಿಸುತ್ತಿದ್ದು, ಈ ಮೂಲಕ ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ. ಭಾರತದಲ್ಲಿ ಮಾತ್ರ ವೈದ್ಯರ ದಿನ ಆಚರಿಸಲಾಗುತ್ತಿಲ್ಲ. ಬದಲಿಗೆ ಬೇರೆ ಬೇರೆ ರಾಷ್ಟ್ರಗಳಲ್ಲಿ, ಬೇರೆ ಬೇರೆ ದಿನಾಂಕದಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತದಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ರಿತಿ ಅಮೆರಿಕಾದಲ್ಲಿ ಮಾರ್ಚ್ 30 ರಂದು, ಕ್ಯೂಬಾದಲ್ಲಿ ಡಿಸೆಂಬರ್ 3ರಂದು, ಇರಾನ್‌ನಲ್ಲಿ ಆಗಸ್ಟ್ 23ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗುತ್ತದೆ.

ಅಮೆರಿಕಾದಲ್ಲಿ 1933 ಮಾರ್ಚ್‌ ತಿಂಗಳಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ, ಸಲ್ಲಿಸಿದ ವೈದ್ಯರುಗಳಿಗೆ ಕಾರ್ಡ್‌ ಕಳಿಸುವ ಮೂಲಕ ಹಾಗೂ ನಿಧನರಾದ ವೈದ್ಯರುಗಳ ಸಮಾಧಿಗೆ ಪುಪ್ಪಾರ್ಪಣೆ ಮಾಡುವ ಮೂಲಕ ವೈದ್ಯರ ದಿನಾಚರಣೆಯನ್ನು ಆಚರಣೆ ಮಾಡಲಾಗಿತ್ತು.