ವೈದ್ಯರಿಗೆ ಹೇಳೋಣ ಒಂದು ಸಲಾಂ: ವೈದ್ಯರ ಪ್ರಾಮುಖ್ಯ ಅರಿಯುವ ದಿನವಿಂದು!

ಜುಲೈ 1 ರಾಷ್ಟ್ರೀಯ ವೈದ್ಯರ ದಿನದ ಸಂಭ್ರಮ. 1991ರಲ್ಲಿ ಭಾರತ ಸರಕಾರವು ಪ್ರಸಿದ್ಧ ವೈದ್ಯ ‘ಭಾರತರತ್ನ’ ಡಾ. ಬಿಧಾನ್ ಚಂದ್ರ ರಾಯ್ (ಡಾ. ಬಿ.ಸಿ.ರಾಯ್) ರವರ ಜನ್ಮ ದಿನ ಮತ್ತು ಸ್ಮ್ರತಿದಿನದ ಸಲುವಾಗಿ ಈ ವೈದ್ಯದಿನವನ್ನು ಆಚರಿಸಲಾಗುತ್ತಿದೆ.

ವೈದ್ಯರ ಪ್ರಾಮುಖ್ಯತೆಯನ್ನ ಅರಿತುಕೊಳ್ಳಲು ವೈದ್ಯಕೀಯ ವೃತ್ತಿಯನ್ನು ಗೌರವಿಸುವ ಸಲುವಾಗಿ ವೈದ್ಯರ ದಿನವನ್ನು ಆಚರಿಸಿ ಅವರ ವೃತ್ತಿಯ ತ್ಯಾಗವನ್ನು ಸ್ಮರಿಸುವುದು ಈ ದಿನದ ಅವಶ್ಯಕತೆಯಾಗಿದೆ.

ವೈದ್ಯರ ದಿನಾಚರಣೆಯಿಂದ ಅವರ ವೃತಿ ಜೀವನದ ಬದ್ಧತೆಯನ್ನು ಗಟ್ಟಿಗೊಳಿಸಲು ಪೂರಕವಾಗಿದೆ. ಭಾರತದಲ್ಲಿ ಅತೀ ಹೆಚ್ಚಿನ ಜನತೆಯು ವೈದ್ಯರ ಮತ್ತು ಅವರ ಗುಣಮಟ್ಟದ ಚಿಕಿತ್ಸೆಯ ಮೇಲೆ ಅವಲಂಬಿತರಾಗಿದ್ದು, ಇಂತಹ ಆಚರಣೆಯಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಗಳು, ಮತ್ತದರ ಲಭ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆದಂತಾಗುತ್ತದೆ. ಈ ದಿನದಂದು ವೈದ್ಯರ ವಿವಿಧ ಸೇವೆಗಳನ್ನು ಸ್ಮರಿಸೋಣ ಅಲ್ಲವೇ?

ಈ ದಿನ ಏನು ವಿಶೇಷತೆ ತಿಳ್ಕೊಳ್ಳೋಣ:
ವೈದ್ಯರ ಸೇವೆ, ಪ್ರಾಮಾಣಿಕತೆ, ತ್ಯಾಗ ಮನೋಭಾವ, ಮಾನವೀಯ ಗುಣಗಳು ಅದರ ವೃತ್ತಿಯನ್ನು ಆದರ್ಶಮಯವಾಗಿರಿಸಿದೆ. ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಸರಕಾರಗಳು ಮತ್ತು ಸರಕಾರೇತರ ಆರೋಗ್ಯ ಸಂಸ್ಥೆಗಳಿಂದ ಆಚರಿಸಲಾಗುತ್ತದೆ.

ಈ ದಿನದಂದು ಅಲ್ಲಲ್ಲಿ ಆರೋಗ್ಯ ಶಿಭಿರಗಳು ರಕ್ತದಾನ ಮತ್ತು ಆರೋಗ್ಯ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಜೊತೆಗೆ ಆರೋಗ್ಯದ ಪರಿಶೀಲನೆ, ಚಿಕಿತ್ಸೆ, ರೋಗಗಳ ತಡೆಗಟುವಿಕೆ, ರೋಗ ನಿರ್ಣಯ, ಮುಂತಾದದವುಗಳ ಕುರಿತು ಚರ್ಚೆಗಳನ್ನು ಆಯೋಜಿಸಲಾಗುತ್ತದೆ. ಉತ್ತಮ ಮತ್ತು ಆರೋಗ್ಯಕರ ಸಾಮಾಜಿಕ ಅಭಿವೃದ್ಧಿಗಾಗಿ ವೈದ್ಯರ ಮೂಲಕ ರೋಗಿಗಳಿಗೆ ವೈದ್ಯಕೀಯ ಸೇವೆಗಳನ್ನು ಉತ್ತೇಜಿಸಲು ಕಾರ್ಯಕ್ರಮ ರೂಪಿಸಲಾಗುತ್ತದೆ.

ಆರೋಗ್ಯ ಸ್ಥಿತಿ, ಆರೋಗ್ಯ ಸಲಹೆ, ಮಹಿಳೆಯರ ಮತ್ತು ಮಕ್ಕಳಿಗೆ ಪೋಶಕಾಂಶಯುಕ್ತ ಆಹಾರದ ಬಗ್ಗೆ ಮಾಹಿತಿಗಳ ಜೊತೆಗೆ ಶುಚಿತ್ವದ ಬಗ್ಗೆ ಮಾಹಿತಿಯನ್ನು ಈ ದಿನ ನೀಡಲಾಗುತ್ತದೆ.

ವೈದ್ಯಕೀಯ ವೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಲು ಶಾಲಾ-ಕಾಲೇಜುಗಳಲ್ಲಿ ಸೇವೆಗಳ ಬಗ್ಗೆ ಮಾಹಿತಿಗಳನ್ನು ನೀಡುವುದು, ಮತ್ತು ಇದಕ್ಕೆ ಸಂಭಂದಿಸಿದ ರಸಪ್ರಶ್ನೆ, ಕ್ರೀಯಾ ಚಟುವಟಿಕೆಗಳು, ಸೃಜನಾತ್ಮಕ ಜ್ಞಾನಕ್ಕಾಗಿ ವೈಜ್ಞಾನಿಕ ಸಾಧನ ಸಲಕರಣೆಗಳನ್ನು ಒದಗಿಸಿಕೊಡುವುದು ಇತ್ಯಾದಿಯಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಒಟ್ಟಾರೆಯಾಗಿ ವೈದ್ಯರ ಆದರ್ಶಗಳನ್ನು ನೆನೆಪುಕೊಳ್ಳಬೇಕಾದ ಮಹತ್ವದ ದಿನವಿಂದು. ವೈದ್ಯವೃತ್ತಿಗೆ ಬರುವ ವೈದ್ಯರ ಸಂಖ್ಯೆ ಜಾಸ್ತಿಯಾಗಲಿ. ಈ ಕ್ಷೇತ್ರದಲ್ಲಿ ಬದ್ಧತೆ, ಪ್ರಾಮಾಣಿಕತೆಯೂ ಜಾಸ್ತಿಯಾಗಲಿ ಎನ್ನುವುದು ನಮ್ಮೆಲ್ಲರ ಈ ದಿನದ ಹಾರೈಕೆಯಾಗಲಿ
ಎಲ್ಲಾ ವೈದ್ಯರಿಗೂ ಹ್ಯಾಪಿ ಡಾಕ್ಟರ್ಸ್ ಡೇ..