ವಿದ್ಯಾರ್ಥಿಗಳ, ಶಿಕ್ಷಕರ ಪರಿಶ್ರಮಕ್ಕೆ ಸಿಕ್ಕ ಫಲ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

ಉಡುಪಿ: ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಜ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಮತ್ತು ಶಿಕ್ಷಕರ ತಂಡದ ಎರಡು ವರ್ಷದ ಪರಿಶ್ರಮಕ್ಕೆ ಫಲ ಲಭಿಸಿದೆ. ವರ್ಷಪೂರ್ತಿ ಓದಿ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರಿಗಳ ಮಟ್ಟದಲ್ಲಿ ಪ್ರಾಂಶುಪಾಲರ ಹಲವಾರು ಸಭೆಗಳನ್ನು ಮಾಡಿದ್ದೆವು. ಶೈಕ್ಷಣಿಕ ವರ್ಷದ ಆರಂಭದಿಂದ ಪ್ರಥಮ ಸ್ಥಾನದ ಗುರಿಯನ್ನು ಇಟ್ಟಿಕೊಂಡು, ಡಿಡಿಪಿಯು ಮತ್ತು ಕಾಲೇಜಿನ ಶಿಕ್ಷಕರು ತಂಡವಾಗಿ ಕೆಲಸ ಮಾಡಿದ್ದಾರೆ ಎಂದರು.

ಕಳೆದ ವರ್ಷದ ಫಲಿತಾಂಶದ ಮೇಲೆ ಸಾಕಷ್ಟು ಅಧ್ಯಯನ ನಡೆಸಿ, ನೋಡಲ್ ಆಫೀಸರ್‌ಗಳನ್ನು ನೇಮಕ ಮಾಡಿ ಶಾಲೆಯಲ್ಲಿ ವಿಶೇಷ ತರಗತಿಗಳನ್ನು ಮಾಡಿದ್ದೆವು. ಹಿಂದಿನ ಐದು ವರ್ಷಗಳ ಫಲಿತಾಂಶ ಪರಾಮರ್ಶೆ ಮಾಡಿ ಕೆಲಸ ಮಾಡಿದ್ದು, ಶಿಕ್ಷಕರಿಗೆ ಸಾಕಷ್ಟು ಕಟ್ಟುನಿಟ್ಟಿನ ಸೂಚನೆ ನಿರ್ದೇಶನಗಳನ್ನು ನೀಡಿದ್ದೆವು ಎಂದು ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಮೂರು ಹಂತದ ಸಭೆ ನಡೆಸಿದ್ದು, ಡಿಡಿಪಿಯು ಪ್ರತಿ ತಿಂಗಳು ಸಭೆ ಮಾಡಿದ್ದಾರೆ.ಜಿಲ್ಲಾ ಪಂಚಾಯತ್ ಸಿಇಓ, ಎಸ್‌ಪಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪರೀಕ್ಷೆಯ ಸಂದರ್ಭ ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಶ್ರದ್ಧೆಯಿಂದ ಕೆಲಸ ಮಾಡಿರುವುದರಿಂದ ಈ ಫಲಿತಾಂಶ ಸಾಧ್ಯವಾಗಿದೆ ಎಂದರು.

ರಾಜ್ಯ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಕ 20 ಅಂಶಗಳ ಸುತ್ತೋಲೆ ನೀಡಿತ್ತು. ಈ ಕಾರ್ಯಕ್ರಮವನ್ನು ಪ್ರತಿ 15 ದಿನಕ್ಕೊಮ್ಮೆ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಪೂರ್ಣ ಸಹಕಾರವನ್ನು ನೀಡಿದ್ದರು, ಸಚಿವರು ಮುತುವರ್ಜಿ ವಹಿಸಿ ಸಾಕಷ್ಟು ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ.

ಸರಕಾರದ ಸುತ್ತೋಲೆಯ ಎಲ್ಲಾ ಅಂಶಗಳನ್ನು ಜಾರಿಗೆ ತಂದಿದ್ದೇವೆ. ಮುಂದಿನ ವರ್ಷ ಕೂಡ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಒಂದು ತಂಡವಾಗಿ ಕೆಲಸ ಮಾಡುತ್ತೇವೆ ಎಂದರು.