ವಿಕಸನ: ಉಚಿತ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಸಂಪನ್ನ

ಸಿದ್ಧಾಂತ್ ಫೌಂಡೇಶನ್ ನ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ರಾಜ್ಯ ಮಟ್ಟದ ಹತ್ತು ದಿನಗಳ ‘ವಿಕಸನ’ ಬೇಸಿಗೆ ಶಿಬಿರವು, ಇತ್ತೀಚಿಗೆ ಅಂಬಲಪಾಡಿಯ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಸಭಾಭವನದಲ್ಲಿ ಸಂಪನ್ನಗೊಂಡಿತು. ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು ಬಳಿಕ ಶಿಬಿರದ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮವು ಜರುಗಿತು.
10ನೇ ತರಗತಿಯ ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗಳಿಗೆ ಪೂರಕವಾಗುವಂತೆ ನುರಿತ ವಿಶೇಷ ತಜ್ಞರಿಂದ ಚಟುವಟಿಕೆ ಆಧಾರಿತ ಕಲಿಕೆಗಳಾದ ವಿಜ್ಞಾನ, ಗಣಿತ, ವಾಣಿಜ್ಯ ಹಾಗೂ ಪ್ರಯೋಗಶಾಲಾ ಪ್ರಯೋಗದ ಕುರಿತು ಮಾಹಿತಿ ಮತ್ತು ಕೌಶಲ್ಯ ಆಧಾರಿತ ಕಲಿಕೆಗಳಾದ ಹಾಡು , ನಾಟಕ, ಚಿತ್ರಕಲೆ, ಕರಕುಶಲ ತರಬೇತಿ, ಮಾತುಗಾರಿಕೆ, ನಿರೂಪಣೆ, ಯೋಗ, ಪ್ರಥಮ ಚಿಕಿತ್ಸೆ ವಿಷಯಗಳ ಕುರಿತು ತರಬೇತಿ ನೀಡಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಸಮುದ್ರ ತೀರ ಭೇಟಿ, ಚಾರಣದಂತಹ ಚಟುವಟಿಕೆಗಳನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 90 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಬಿರದ ಸಂಪೂರ್ಣ ಉಸ್ತುವಾರಿಯನ್ನು ಕನ್ನಡ ಪ್ರಾಧ್ಯಾಪಕರಾದ ಪ್ರೊ. ಧೀರಜ್ ಬೆಳ್ಳಾರೆ ವಹಿಸಿದ್ದರು. ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಇಪ್ಪತ್ತೈದಕ್ಕೂ ಹೆಚ್ಚಿನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿದ್ಧಾಂತ್ ಫೌಂಡೇಶನ್ ನ ಅಧ್ಯಕ್ಷರಾದ ಸಿ. ಎ ಗೋಪಲಕೃಷ್ಣ ಭಟ್ ,ಟ್ರಸ್ಟಿಯಾದ ನಮಿತಾ ಜಿ ಭಟ್, ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಮೀಕ್ಷಾ ನಿರೂಪಿಸಿ ವಂದಿಸಿದರು.