‘ವಸುಧೈವ ಕುಟುಂಬಕಂ ಧ್ಯೇಯ ವಾಕ್ಯಕ್ಕನುಗುಣವಾಗಿ ‘ಒಂದು ಆರೋಗ್ಯಕ್ಕಾಗಿ ಆಯುರ್ವೇದ’ ದಿನಾಚರಣೆ; ಸರ್ವರಿಗೂ ಆರೋಗ್ಯ

ಲೇಖನ ಸಹಕಾರ :ಶರೋನ್ ಶೆಟ್ಟಿ

ಆಯುರ್ವೇದದ ದೇವರು ಧನ್ವಂತರಿಯ ಗೌರವಾರ್ಥವಾಗಿ ಆಯುರ್ವೇದ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ಬಾರಿಯ ಆಯುರ್ವೇದ ದಿನವನ್ನು ಸಾರ್ವಜನಿಕ ಸಂದೇಶ , ಸಾರ್ವಜನಿಕ ಸಹಭಾಗಿತ್ವ ಮತ್ತು ಸಾಮೂಹಿಕ ಆಂದೋಲನದ ಮೇಲೆ ಗಮನ ಕೇಂದ್ರೀಕರಿಸಿ ಆಯೋಜಿಸಲಾಗುತ್ತಿದೆ. ಇದು ಕೇವಲ ಮಾನವರಿಗಾಗಿ ಮಾತ್ರವಲ್ಲದೆ ಪರಿಸರಕ್ಕೆ ಪೂರಕವಾಗಿಯೂ ಆಚರಿಸಲ್ಪಡುತ್ತದೆ. ಈ ವಿಷಯವು ಭಾರತದ G-20 ಅಧ್ಯಕ್ಷತೆಯ ‘ವಸುಧೈವ ಕುಟುಂಬಕಂ’ ವಿಷಯಕ್ಕೆ ಅನುಗುಣವಾಗಿದೆ ಮತ್ತು ಆಯುರ್ವೇದ ದಿನ-2023 ರ ಮುಖ್ಯ ಥೀಮ್ ಅನ್ನು ‘ಒಂದು ಆರೋಗ್ಯಕ್ಕಾಗಿ ಆಯುರ್ವೇದ’ ಎನ್ನುವ ಮಾನವ-ಪ್ರಾಣಿ-ಸಸ್ಯ-ಪರಿಸರ ದ ಮಧ್ಯದ ಸಂಬಂಧಗಳ ಮೇಲೆ ಕೇಂದ್ರೀಕರಿಸಲಾಗಿದೆ.

ಆಯುರ್ವೇದದ ಸಾಮರ್ಥ್ಯವನ್ನು ಬಳಸಿಕೊಂಡು ಸಮಗ್ರ ಚಿಕಿತ್ಸೆ ಮತ್ತು ಆರೋಗ್ಯಕರ ಜೀವನ ವಿಜ್ಞಾನವನ್ನು ಬಳಸಿಕೊಂಡು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ತರುವ ಉದ್ದೇಶ ಹೊಂದಲಾಗಿದೆ. ಆಯುರ್ವೇದದ ಬಗ್ಗೆ ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತದಾದ್ಯಂತ ಒಂದು ತಿಂಗಳ ಅವಧಿಯ ಆಚರಣೆಗಳನ್ನು ಯೋಜಿಸಲಾಗಿದೆ. ಈ ವರ್ಷದ 8ನೇ ಆಯುರ್ವೇದ ದಿನವು ನವೆಂಬರ್ 10 ರಂದು ಆಚರಿಸಲಾಗುತ್ತಿದೆ.

ರೋಗ ಚಿಕಿತ್ಸೆ ಮಾತ್ರವಲ್ಲದೆ ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ-ಆಯುರ್ವೇದವನ್ನು ಉತ್ತೇಜಿಸುವುದರ ಮೇಲೆ ಗಮನ ಕೇಂದ್ರೀಕರಿಸಿ, ಸ್ವಯಂಪ್ರೇರಿತ ಭಾಗವಹಿಸುವಿಕೆಗಾಗಿ ಜನರನ್ನು ಸಬಲೀಕರಣಗೊಳಿಸುವ ಮತ್ತು ಪ್ರೋತ್ಸಾಹಿಸುವ ಮೂಲಕ ಆರೋಗ್ಯವನ್ನು ಉತ್ತೇಜಿಸುವುದು ಮತ್ತು ಆಯುರ್ವೇದದ ಸಾಮರ್ಥ್ಯವನ್ನು ಬಳಸಿಕೊಳ್ಳಲು ವೃತ್ತಿಪರರನ್ನು ಪ್ರೋತ್ಸಾಹಿಸುವುದು ಆಯುರ್ವೇದ ದಿನಾಚರಣೆಯ ಉದ್ದೇಶವಾಗಿದೆ.

ಇದು ಸುಸ್ಥಿರ ಕೃಷಿ, ಮಾನವ, ಪ್ರಾಣಿ, ಸಸ್ಯ, ಅರಣ್ಯ ಮತ್ತು ಜಲಚರಗಳ ಆರೋಗ್ಯ, ಆಹಾರ ಭದ್ರತೆ ಇತ್ಯಾದಿಗಳ ಮೇಲೆ ಕೇಂದ್ರೀಕರಿಸುವ ಪ್ರದೇಶಗಳನ್ನು ಒಳಗೊಂಡಿದೆ. ವಿಷಯವು ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ: ರೈತರಿಗಾಗಿ ಆಯುರ್ವೇದ, ವಿದ್ಯಾರ್ಥಿಗಳಿಗಾಗಿ ಆಯುರ್ವೇದ ಮತ್ತು ಜನಸಾಮಾನ್ಯರಿಗಾಗಿ ಆಯುರ್ವೇದ.

ಒಂದು ತಿಂಗಳ ಅವಧಿಯ ಆಯುರ್ವೇದ ಅಭಿಯಾನದಲ್ಲಿ ಆಯುರ್ವೇದ ಸಂಸ್ಥೆಗಳ ಪ್ರದರ್ಶನ, ಮಿನಿ-ಪ್ರದರ್ಶನ್, ಸಂಶೋಧನಾ ಅಧ್ಯಯನಗಳ ಫಲಿತಾಂಶಗಳ ಪ್ರಸಾರ, ವೈದ್ಯಕೀಯ ಶಿಬಿರಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಸಾರ್ವಜನಿಕ ಜಾಗೃತಿ ಉಪನ್ಯಾಸಗಳು, ರೈತರಿಗೆ, ಸಾರ್ವಜನಿಕರಿಗೆ ಸಾಮಾನ್ಯ ಔಷಧೀಯ ಸಸ್ಯಗಳ ವಿತರಣೆಯನ್ನು ಒಳಗೊಂಡಿರುತ್ತದೆ. ಆಯುರ್ವೇದವನ್ನು ಜನಪ್ರಿಯಗೊಳಿಸಲು ವಿವಿಧ ಸ್ಪರ್ಧೆಗಳು, ಆಯುರ್ವೇದ ಮತ್ತು ರೈಡರ್ಸ್ ಮೆರವಣಿಗೆ ಓಟದಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.