ರಾಮಲಲ್ಲಾನ ದರ್ಶನ ಪಡೆದು ಮಂತ್ರಮುಗ್ದರಾದ ರಕ್ಷಿತ್ ಶೆಟ್ಟಿ; ಅರುಣ್ ಯೋಗಿರಾಜ್ ಅವರನ್ನು ಭೇಟಿಯಾಗುವ ಬಯಕೆ ತೋಡಿಕೊಂಡ ಸಿಂಪಲ್ ಹುಡುಗ

ಅಯೋಧ್ಯಾ: ಕನ್ನಡ ಚಿತ್ರನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅಯೋಧ್ಯಾ ರಾಮಜನ್ಮಸ್ಥಾನದಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರಕ್ಕೆ ಭೇಟಿ ನೀಡಿದ್ದು, ರಾಮಲಲ್ಲಾನ ದರ್ಶನ ಪಡೆದು ಮಂತ್ರಮುಗ್ಧರಾಗಿದ್ದಾರೆ. ಪ್ರಾಣಪ್ರತಿಷ್ಠೆ ನಡೆದಾಗಿನಿಂದಲೂ ರಾಮನನ್ನು ನೇರವಾಗಿ ನೋಡಬೇಕುನ್ನುವ ಹಂಬಲವನ್ನು ನಿಜವಾಗಿಸಿಕೊಂಡಿರುವ ರಕ್ಷಿತ್, ಸುಮಾರು ಅರ್ಧ ಗಂಟೆಗಳ ಕಾಲ ರಾಮನ ಮೂರ್ತಿಯನ್ನು ಆತನ ಸೂಜಿಗಲ್ಲಿನಂತೆ ಆಕರ್ಷಿಸುವ ಕಣ್ಣುಗಳನ್ನು ತದೇಕಚಿತ್ತದಿಂದ ನೋಡಿ ಶಿಲ್ಪಕಾರನ ಕಲಾ ನೈಪುಣ್ಯಕ್ಕೆ ತಲೆದೂಗಿದ್ದಾರೆ.

ರಾಮ ಕೇವಲ ದೇವರಾಗಿರದೆ, ಜೀವ ತುಂಬಿರುವ ಒಂದು ಕಲಾಪ್ರಕಾರದಂತೆ ಕಂಡಿದ್ದು, ಮೂರ್ತಿಯನ್ನು ಕೆತ್ತಿದ ಅರುಣ್ ಯೋಗಿರಾಜ್ ಒಂದು ದಂತ ಕತೆಯಾಗಿ ನೆನಪಿಸಲ್ಪಡುತ್ತಾರೆ ಎಂದಿರುವ ರಕ್ಷಿತ್, ಒಂದು ದಿನ ತಾನು ಅರುಣ್ ಯೋಗಿರಾಜ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ನಮ್ಮ ಆರಾಧ್ಯ ರಾಮನನ್ನು ಕೆತ್ತಿದ ಅವರ ಅನುಭವದ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಜೈ ಸಿಯಾ ರಾಮ್, ಜೈ ಶ್ರೀ ರಾಮ್ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಅಯೋಧ್ಯೆ ಜೊತೆಗೆ ಕಾಶಿ, ಪ್ರಯಾಗರಾಜ್ ನ ತ್ರಿವೇಣಿ ಸಂಗಮ ಮತ್ತು ಹನುಮಾನ್ ಮಂದಿರಕ್ಕೂ ಭೇಟಿ ನೀಡಿರುವ ರಕ್ಷಿತ್, ಅತ್ಮೀಯ ಸ್ವಾಗತಕ್ಕಾಗಿ ಮಂದಿರದ ಟ್ರಸ್ಟಿಗಳು ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.