ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ಕಾರ್ಕಳ ಮಂಡಲ ನೇತೃತ್ವದಲ್ಲಿ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯ ವಿರುದ್ಧ ದಿಕ್ಕಾರ ಕೂಗಿದರು. ‘ದಂಡ ಸರಕಾರ ರಾಜ್ಯ ಕಾಂಗ್ರೆಸ್ ಸರಕಾರ’, ‘ಭಂಡ ಸರಕಾರ ಹಿಂದೂ ವಿರೋಧಿ ಸರಕಾರ’ ಹಾಡು ಹಾಡಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಬಿಡುಗಡೆಗೊಳಿಸದಿರುವುದು, ಹಿಂದೂ ವಿರೋಧಿ ನೀತಿ, ಕಟ್ಟಡ ಸಾಮಗ್ರಿಗಳ ಪೂರೈಕೆಗೆ ತಡೆ, ರೇಷನ್ ಕಾರ್ಡ್ ರದ್ದತಿ, ಹಾಲಿನ ಸಬ್ಸಿಡಿ ಬಾಕಿ, ಅಕ್ರಮ ಸಕ್ರಮ ಅರ್ಜಿ ತಿರಸ್ಕೃತ, ಏಕ ವಿನ್ಯಾಸ ನಕ್ರೆ 9/11 ಎ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು, ರಾಜ್ಯದಲ್ಲಿರುವುದು ಶೂನ್ಯ ಅಭಿವೃದ್ಧಿಯ 60 ಪರ್ಸೆಂಟ್ ಭ್ರಷ್ಟ ಸರಕಾರ. ಯಾವ ಇಲಾಖೆಯಲ್ಲೂ ಹಣ ಕೊಡದೆ ಕೆಲಸ ಆಗಲ್ಲ. ಇಲಾಖೆ ಇಲಾಖೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬ್ರೋಕರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಲಾಖೆ ಇಲಾಖೆಗಳಲ್ಲಿ ಹಣ ವಸೂಲಿಯ ದಂಧೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಾಣಂತಿಯರು ಸರಕಾರಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಇಲ್ಲ. ಬಾಣಂತಿಯರ ಸಾವಿನ ಪಶ್ಚಾತ್ತಾಪ ಸರಕಾರಕ್ಕಿಲ್ಲ. ಇದೊಂದು ಕಿವಿ, ಬಾಯಿ ಇಲ್ಲದ ಕುರುಡು ಸರಕಾರ. ಗ್ರಾಮೀಣ ಭಾಗದ ಜನರ ಭಾವನೆ ಸರಕಾರಕ್ಕೆ ಅರ್ಥ ಆಗುವುದಿಲ್ಲ. ಬಡವರು ಮಾತನಾಡಿದೆ ಇರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಿಂಡಿ ಅಣೆಕಟ್ಟು, ರಸ್ತೆಗಳ ದುರಸ್ತಿಗೆ ಹಣ ಬಿಡುಗಡೆ ಮಾಡದಿರುವಷ್ಟು ದುಸ್ಥಿತಿಗೆ ರಾಜ್ಯ ಸರಕಾರ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್, ಬಿಜೆಪಿ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ರೇಶ್ಮಾ ಉದಯ ಶೆಟ್ಟಿ, ಮಹಾವೀರ ಹೆಗ್ಡೆ, ಬೋಳ ಪ್ರಭಾಕರ್ ಕಾಮತ್, ಮಣಿರಾಜ್ ಶೆಟ್ಟಿ, ಮಟ್ಟಾರು ರತ್ನಾಕರ್ ಹೆಗ್ಡೆ, ಮುಟ್ಲುಪಾಡಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.













