ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…..

ಸನಾತನ ಸಂಸ್ಕೃತಿ ಎಷ್ಟು ಪುರಾತನವಾದದ್ದು ಎನ್ನುವುದು ಊಹೆಗೆ ನಿಲುಕದ ವಿಚಾರ. ಜೀವ ವಿಕಾಸದ ಹಾದಿಯಲ್ಲಿ ಅಲೆಮಾರಿಯಂತೆ ಬದುಕುತ್ತಿದ್ದ ‘ನರ’ ಪ್ರಜಾತಿಯು, ನಾಗರೀಕ ಸಮಾಜವಾಗಿ ಅಭ್ಯುದಯ ಹೊಂದಿ, ವ್ಯವಸಾಯ ಪದ್ದತಿಯನ್ನು ಅಳವಡಿಸಿಕೊಂಡು ವಿವಿಧ ವೃತ್ತಿಕಾರ್ಯಗಳನ್ನು ಮಾಡುತ್ತಾ ಪ್ರಕೃತಿಯ ಬದಲಾವಣೆಗಳನ್ನು ಸೂಕ್ಷವಾಗಿ ಗಮನಿಸುತ್ತಾ ಈ ಬದಲಾವಣೆಯ ಪರ್ವಗಳನ್ನು ಖಗೋಳಶಾಸ್ತ್ರಕ್ಕೆ ತಾಳೆ ಹಾಕುತ್ತಾ ವಿಭಿನ್ನ ರೀತಿಯ ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಬಂದಿರಬಹುದು.

ಭೂಮಿ, ಸೂರ್ಯ, ಚಂದ್ರ ಹಾಗೂ ಗ್ರಹ ನಕ್ಷತ್ರಾದಿಗಳ ಚಲನೆಗಳನ್ನು ಆಧರಿಸಿ ಹಲವು ಹಬ್ಬ ಹಾಗೂ ಆಚರಣೆಗಳನ್ನು ಭಾರತೀಯರು ಆಚರಿಸುತ್ತಾರೆ. ಈ ಆಚರಣೆಗಳು ಭೌಗೋಳಿಕ ಹಿನ್ನೆಲೆ, ಸಮುದಾಯ ಹಾಗೂ ವೃತ್ತಿ ಆಧಾರಿತವಾಗಿ ಭಿನ್ನ ಭಿನ್ನವಾಗಿದ್ದರೂ ಇವೆಲ್ಲವುಗಳ ಮೂಲ ಒಂದೇ ಆಗಿರುತ್ತದೆ. ಭಾರತೀಯರ ಕಾಲಮಾನ ಶುರುವಾಗುವುದು ‘ಯುಗಾದಿ’ಯಿಂದಲೇ. ಅರವತ್ತು ಸಂವತ್ಸರಗಳ ಕಾಲಮಾನದಲ್ಲಿ ಪ್ರತಿ 365 ದಿನಗಳಿಗೊಂದರಂತೆ ಒಂದು ಸಂವತ್ಸರ ಬದಲಾವಣೆಯಾಗಿ ಹೊಸಯುಗವೊಂದರ ಆರಂಭಕ್ಕೆ ನಾಂದಿ ಹಾಡುವ ಪ್ರಕ್ರಿಯೆಯೆ ಯುಗಾದಿ.

ಯುಗಾದಿಯಲ್ಲಿಯೂ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಗಳೆಂಬ ಎರಡು ವಿಧಗಳುಂಟು. ಯುದ್ದ ಮುಂತಾದ ಕ್ಷಾತ್ರ ಕರ್ಮಗಳಲ್ಲಿ ನಿರತರಾದ ಕ್ಷತಿಯ ಹಾಗೂ ಸೂರ್ಯನ ಚಲನೆಯನ್ನೇ ಆಧರಿಸಿ ನಡೆಸುವ ಕೃಷಿ ಮುಂತಾದ ಕಾರ್ಯಕ್ಷೇತ್ರಗಳಲ್ಲಿ ತೊಡಗಿರುವ ವೈಶ್ಯ ಸಮುದಾಯಗಳಿಗೆ ಸೌರಮಾನ ಯುಗಾದಿಯಾದರೆ ಇನ್ನುಳಿದ ಕೆಲಸ ಕಾರ್ಯಗಳಲ್ಲಿ ನಿರತರಾದವರಿಗೆ ಚಾಂದ್ರಮಾನ ಯುಗಾದಿ ಪ್ರಮುಖ.

ತುಳುನಾಡಿನ ತುಳುವರು ಪ್ರಮುಖವಾಗಿ ಕೃಷಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದು, ಸೂರ್ಯನ ಚಲನೆಯೇ ಮುಖ್ಯವಾಗಿದ್ದುಕೊಂಡು, ಸೂರ್ಯನು ಮೇಷ ರಾಶಿಯಲ್ಲಿ ಪ್ರವೇಶಿಸುವ ದಿನದಿಂದಲೇ ಹೊಸವರ್ಷವನ್ನು ಆಚರಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ತುಳುವರ ಹೊಸ ವರ್ಷ ‘ಬಿಸು’ ಹಾಗೂ ಮೊದಲನೆ ತಿಂಗಳು ‘ಪಗ್ಗು’ವಿನಿಂದ ಆರಂಭವಾಗುತ್ತದೆ.

ಭಾರತದಲ್ಲಿ ಅನಾದಿ ಕಾಲದಿಂದಲೂ ಪಂಚಾಗ ಪದ್ದತಿಯನ್ನು ಆಧರಿಸಿ ಕೆಲಸ ಕಾರ್ಯಗಳನ್ನು ನಡೆಸುವ ಉಲ್ಲೇಖ ವೇದ ಹಾಗೂ ಇತಿಹಾಸ ಕಾವ್ಯಗಳಲ್ಲೂ ದಾಖಲಾಗಿವೆ.

ಸೂರ್ಯ ಸಿದ್ದಾಂತ ಎನ್ನುವ ಗ್ರಂಥವು ಸಂಪೂರ್ಣ ಖಗೋಳಶಾಸ್ತ್ರೀಯ ಗ್ರಂಥವಾಗಿದ್ದು ಕಡಿಮೆ ಎಂದರೂ 50 ಸಾವಿರ ವರ್ಷ ಹಿಂದಿನದು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ವರಾಹಮಿಹಿರ, ಭಾಸ್ಕರ, ಆರ್ಯಭಟ, ಲಗಾಧ, ಬ್ರಹ್ಮಗುಪ್ತ, ಲಲ್ಲ, ಶ್ರೀಪತಿ, ಮಹೇಂದ್ರಸೂರಿ, ಗೌತಮ ಸಿದ್ದ ಮುಂತಾದ ಖಗೋಳಶಾಸ್ತ್ರಜ್ಞರು ಜನ್ಮ ತಳೆದಿದ್ದಾರೆ. ಭಾರತದ ಎರಡು ಮಹಾಕಾವ್ಯಗಳಾದ ‘ರಾಮಾಯಣ’ ಹಾಗೂ ‘ಮಹಾಭಾರತ’ದಲ್ಲೂ ವಾಲ್ಮೀಕಿ ಹಾಗೂ ವ್ಯಸರು ಅಂದಿನ ಖಗೋಳಶಾಸ್ತ್ರೀಯ ವಿದ್ಯಮಾನಗಳನ್ನು ದಾಖಲಿಸಿಟ್ಟಿದ್ದಾರೆ.

ಒಬ್ಬ ಧರ್ಮಭೀರು ರಾಜನ ಶಾಸನ ಸ್ಥಾಪಿಸಲ್ಪಟ್ಟ ದಿನವನ್ನೂ ಹೊಸಶಕೆಯೊಂದರ ಹೊಸ ಪಂಚಾಗವಾಗಿ ಅಂಗೀಕರಿಸುವ ಸಂಪ್ರದಾಯವೂ ಭಾರತದಲ್ಲಿ ನಡೆದುಕೊಂಡು ಬಂದಿದೆ. ಇಂತಹ ಪರಂಪರೆಗೆ ನಾಂದಿ ಹಾಡಿರುವುದು ಋಷಿ ವಿಶ್ವಾಮಿತ್ರರು ಎನ್ನುವ ಅಭಿಪ್ರಾಯಗಳನ್ನು ಇಂದಿನ ಭೂಖಗೋಳಶಾಸ್ತ್ರ ಅಧ್ಯಯನಕಾರರು ನಮ್ಮ ಮುಂದಿಡುತ್ತಾರೆ.

ಅಂದಿನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಪಂಚಾಗವನ್ನು ತಿರಸ್ಕರಿಸಿ ತಾವೇ ಹೊಸ ಪಂಚಾಗವನ್ನು ರಚಿಸಿದರು ಎನ್ನುವ ಅಭಿಪ್ರಾಯಗಳನ್ನು ಅಧ್ಯಯನಕಾರರು ವಿವರಿಸುತ್ತಾರೆ. ಹೀಗೆ ಹಲವಾರು ಕಾಲಮಾನದಲ್ಲಿ ಹಲವಾರು ರಾಜ-ಮಹಾರಾಜರು ತಮ್ಮ ತಮ್ಮ ಅನುಕೂಲಕ್ಕನುಗುಣವಾಗಿ ಪಂಚಾಗಳನ್ನು, ಹೊಸ ಪದ್ದತಿಗಳನ್ನು ಅನುಸರಿಸಿಕೊಂಡು ಬಂದಿರುತ್ತಾರೆ. ಕಾಲಮಾನದ ಗಣನೆ ಸುಲಭ ಹಾಗೂ ಸರಳವಾಗಿಸಲು ಹಾಗೂ ಗ್ರಹಗಳ ಚಲನೆಯನ್ನಾಧರಿಸಿ ಭೂತ-ಭವಿಷ್ಯ-ವರ್ತಮಾನಗಳ ಆಗುಹೋಗುಗಳನ್ನು ನಿರ್ಧರಿಸಲು ಈ ಪಂಚಾಗಗಳು ಸಹಾಯ ಮಾಡುತ್ತವೆ.

ಯುಗಾದಿಯೆನ್ನುವುದು ಹೊಸ ಸಂವತ್ಸರದ ಮುನ್ನುಡಿ. ಶೋಭಕೃತ್ ಸಂವತ್ಸರಕ್ಕೆ ವಿದಾಯ ಹಾಡಿ ಕ್ರೋಧಿ ಸಂವತ್ಸರವನ್ನು ಬರಮಾಡಿಕೊಳ್ಳುವ ಸಮಯವಿದು. ಜೀವನದಲ್ಲಿ ಸುಖ-ದುಖ, ನೋವು-ನಲಿವು, ಯಶಸ್ಸು-ಅಪಯಶಸ್ಸು ಎಲ್ಲವೂ ಬರುತ್ತಿರುತ್ತದೆ. ಇದನ್ನು ಸಾಂಕೇತಿಕವಾಗಿ ನಿರೂಪಿಸಲು ಬೇವು-ಬೆಲ್ಲ ತಿನ್ನುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದೇವೆ.

ಆರೋಗ್ಯದ ದೃಷ್ಟಿಯಿಂದಲೂ ಬೇವು ಮತ್ತು ಬೆಲ್ಲ ಸೇವಿಸುವುದು ಒಳಿತಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಯಾವುದೂ ಅವೈಜ್ಞಾನಿಕವಲ್ಲ, ಪ್ರತಿಯೊಂದು ಆಚರಣೆಗೂ ತನ್ನದೇ ಆದ ವೈಜ್ಞಾನಿಕ ನೆಲೆಗಟ್ಟಿರುತ್ತದೆ. ಕಾಲಾನಂತರದಲ್ಲಿ ಅಜ್ಞಾನದಿಂದ ಕೆಲವೊಂದು ಮೂಢನಂಬಿಕೆಗಳು ಹುಟ್ಟಿಕೊಂಡಿರಬಹುದು ಆದರೆ ಮೂಲವನ್ನು ಶೋಧಿಸಿದರೆ ಇವೆಲ್ಲವೂ ಅನುಭವದ ಆಧಾರದಲ್ಲಿ ಜನ್ಮತಾಳಿವೆ ಎನ್ನುವುದು ವೇದ್ಯವಾಗುವುದು.

ಯುಗಾದಿಯ ಈ ಸಂಭ್ರಮವು ಎಲ್ಲರ ಜೀವನದಲ್ಲೂ ಸುಖ ಶಾಂತಿ ಸಮೃದ್ದಿಯನ್ನು ತರಲಿ… ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು….