‘ಯುಐ’ ಸಿನಿಮಾ ಬಿಡುಗಡೆಯ ದಿನಾಂಕ ಘೋಷಿಸಿದ ಉಪೇಂದ್ರ

ಬೆಂಗಳೂರು: ನಟ, ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಬಹುನಿರೀಕ್ಷಿತ ‘ಯುಐ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
‘ಯುಐ’ ಸಿನಿಮಾ ಇದೇ ಡಿಸೆಂಬರ್ 20ರಂದು ತೆರೆಗೆ ಬರಲಿದೆ ಎಂದು ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಘೋಷಿಸಿದ್ದಾರೆ.

ಉಪೇಂದ್ರ ಅವರು ಈ ಚಿತ್ರದಲ್ಲಿ ನಾಯಕ ನಟನ ಪಾತ್ರ ನಿರ್ವಹಿಸಿದ್ದಾರೆ. ಈ ಮೊದಲು ‘ಯುಐ’ ಚಿತ್ರ ಏಪ್ರಿಲ್‌ನಲ್ಲಿಯೇ ತೆರೆಗೆ ಬರಬೇಕಿತ್ತು. ಗ್ರಾಫಿಕ್ಸ್ ಕೆಲಸದಿಂದ ಚಿತ್ರ ಬಿಡುಗಡೆ ವಿಳಂಬವಾಗಿತ್ತು. ನಂತರ ಗೌರಿ-ಗಣೇಶ ಹಬ್ಬಕ್ಕೆ ಬರುತ್ತದೆ ಎಂದು ಹೇಳಲಾಗಿತ್ತು. ಅದೂ ಮುಂದಕ್ಕೆ ಹೋಯಿತು. ಅಕ್ಟೋಬರ್‌ನಲ್ಲಿ ಬರುತ್ತೆ ಎಂದು ಹೇಳಿದ್ದರು. ಇದೀಗ ವರ್ಷಾಂತ್ಯಕ್ಕೆ ಯುಐ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಸದಾ ಪ್ರೇಕ್ಷಕರ ತಲೆಗೆ ಹುಳ ಬಿಡುವ ಉಪೇಂದ್ರ ಅವರು ʼಯು-ಐʼ ಚಿತ್ರ ರಿಲೀಸ್‌ ಪೋಸ್ಟರ್‌ ನಲ್ಲಿಯೂ ಟ್ವಿಸ್ಟ್‌ ನೀಡಿದ್ದಾರೆ. “ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್ / ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ….. ಎಂದು ಮತ್ತೆ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಜಿ ಮನೋಹರನ್‌ ಮತ್ತು ಶ್ರೀಕಾಂತ್‌ ಕೆಪಿ ನಿರ್ಮಾಣದಲ್ಲಿ ತಯಾರಾಗಿರುವ ʼಯು-ಐʼ ಸಿನಮಾ ಪ್ಯಾನ್‌ ಇಂಡಿಯಾ ಚಿತ್ರವಾಗಿದ್ದು, ಕನ್ನಡದೊಂದಿಗೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.

ಚಿತ್ರದಲ್ಲಿ ಉಪೇಂದ್ರ ಅವರ ಜತೆ ರೀಶ್ಮಾ ನಾಣಯ್ಯ, ಮುರಳಿ ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತವಿದೆ.