ಯಶಸ್ಸು ಕಂಡ ‘ವಿನಮಿತ’ ಹಳೆಯ ವಿದ್ಯಾರ್ಥಿ ಸಂಘದ ಪುನರ್ಮಿಲನ.

ಕೊಚ್ಚಿ: ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿಗಳ ಸಂಘವಾದ ‘ವಿನಮಿತ’ವು ಜುಲೈ 27ರಂದು ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ‘REU_NITTE 24’ ಎಂಬ ಮಹತ್ವದ ಪುನರ್ಮಿಲನವನ್ನು ಕೊಚ್ಚಿಯ ಚಕೋಲಾಸ್ ಪೆವಿಲಿಯನ್ನಲ್ಲಿ ಆಯೋಜಿಸಿತ್ತು.

ಈ ಕಾರ್ಯಕ್ರಮವು ಗೌರವಾನ್ವಿತ ಅತಿಥಿಗಳ ಉಪಸ್ಥಿತಿಯಲ್ಲಿ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ನೆಲೆಸಿರುವ ನಿಟ್ಟೆಯ ತಾಂತ್ರಿಕ ಕಾಲೇಜಿನ ಹಳೆವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು. ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಸ್ಪೂರ್ತಿದಾಯಕ ದಿಕ್ಸೂಚಿ ಭಾಷಣ ಮಾಡಿ, ನಾವು ವಿದ್ಯಾರ್ಜನೆ ಮಾಡಿದ ಸಂಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾರ್ಥಿಗಳ ಮಹತ್ವವನ್ನು ವಿವರಿಸಿದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಸಾಧನೆಗಳನ್ನು ಶ್ಲಾಘಿಸುವುದರೊಂದಿಗೆ ಸಂಸ್ಥೆಯ ಭವಿಷ್ಯದ ಪ್ರಯತ್ನಗಳಿಗೆ ಕೊಡುಗೆ ನೀಡುವಂತೆ ಹಳೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಅವರು ತಾಂತ್ರಿಕ ಶಿಕ್ಷಣದ ಪ್ರಗತಿ ಮತ್ತು ನುರಿತ ಎಂಜಿನಿಯರ್ ಗಳನ್ನು ರೂಪಿಸುವಲ್ಲಿ ಸಂಸ್ಥೆ ವಹಿಸಿರುವ ಪ್ರಮುಖ ಪಾತ್ರದ ಬಗ್ಗೆ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಉತ್ಕೃಷ್ಟತೆಯನ್ನು ಮುಂದುವರಿಸಬೇಕು ಮತ್ತು ಎನ್ಎಂಎಎಂಐಟಿಯಲ್ಲಿದ್ದಾಗ ಅವರಲ್ಲಿ ತುಂಬಿದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಅವರು ತಿಳಿಸಿದರು. ಈ ಪುನರ್ಮಿಲನದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಆರ್.ರೈ ಅವರ ಹೃತ್ಪೂರ್ವಕ ಶುಭಾಶಯಗಳು ಮತ್ತು ಉಪಸ್ಥಿತಿಯೂ ಇತ್ತು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಲುಂಕರ್ ಅವರು ಮಾತನಾಡಿ ಸಂಸ್ಥೆಯ ಪ್ರಸ್ತುತ ಉಪಕ್ರಮಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಆಡಳಿತ ವಿಭಾಗದ ಜನರಲ್ ಮ್ಯಾನೇಜರ್ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಹಳೆಯ ವಿದ್ಯಾರ್ಥಿಗಳ ಅಚಲ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು ಮತ್ತು ನಿಟ್ಟೆಯಲ್ಲಿ ಶಿಕ್ಷಣ ಮತ್ತು ಮೂಲಸೌಕರ್ಯಗಳ ಗುಣಮಟ್ಟವನ್ನು ಹೆಚ್ಚಿಸಲು ಟ್ರಸ್ಟ್ ನ ನಿರಂತರ ಪ್ರಯತ್ನಗಳನ್ನು ಉಲ್ಲೇಖಿಸಿದರು. ವಿನಮಿತ ಅಧ್ಯಕ್ಷರಾದ ಮೂಲ್ಕಿ ಜೀವನ್ ಕೆ ಶೆಟ್ಟಿಯವರು ತಮ್ಮ ಭಾಷಣದಲ್ಲಿ, ಇಂತಹ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ನಿಟ್ಟೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎನ್ ವಿನಯ ಹೆಗ್ಡೆಯವರ ಹಾಗೂ ಅನೇಕ ಹಳೆಯ ವಿದ್ಯಾರ್ಥಿಗಳ ಬೆಂಬಲವನ್ನು ಸ್ಮರಿಸಿದರು. ಕಾಲೇಜು ಪ್ರವೇಶ ಪ್ರಕ್ರಿಯೆಯಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಮಕ್ಕಳಿಗೆ ಕೆಲವು ಮೀಸಲಾತಿಗಳನ್ನು ನೀಡುವಂತೆ ಅವರು ಸಂಸ್ಥೆಯ ಆಡಳಿತ ಮಂಡಳಿಯನ್ನು ವಿನಂತಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣ ಮತ್ತು ಹಳೆಯ ವಿದ್ಯಾರ್ಥಿಗಳ ಸಂಬಂಧಗಳ ನಿರ್ದೇಶಕ ಪ್ರೊ.ಪ್ರಸನ್ನ ಕೈಲಾಜೆ, ಡೀನ್ (ಪ್ರವೇಶ) ಡಾ.ರಾಜೇಶ್ ಶೆಟ್ಟಿ, ಎನ್ಎಂಎಎಂಐಟಿಯ ಹಳೆಯ ವಿದ್ಯಾರ್ಥಿಗಳ ಸಂಯೋಜಕ ಡಾ.ಜ್ಞಾನೇಶ್ವರ ಪೈ, ವಿನಮಿತ ಮಾಜಿ ಅಧ್ಯಕ್ಷೆ ಡಾ.ಪ್ರಭಾ ನಿರಂಜನ್, ಕಾಲೇಜಿನ ಅಧಿಕಾರಿ ಅಧೀಕ್ಷಕರಾದ ಸುನೀತಾ ಶೆಟ್ಟಿ, ಕೇಶವ ಮುಗೇರಾಯ, ಶೈಲಜಾ ಶೆಟ್ಟಿ, ಕ್ರೀಡಾ ಆಡಳಿತಾಧಿಕಾರಿ ಶ್ಯಾಮ್ ಸುಂದರ್ ಎಂ, ವಿನಮಿತ ಉಪಾಧ್ಯಕ್ಷ ಅವಿನಾಶ್ ಕೃಷ್ಣಕುಮಾರ್, ಸಹಕಾರ್ಯದರ್ಶಿ ಶರತ್ ಸಾಲಿಯಾನ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ತಯಾರಿಯ ರೂವಾರಿ ಜೋಸೆಫ್ ಎನ್ ಜೋಸ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ ಸಹಸಂಚಾಲಕ ನಿಯಾಜ್ ಇಬ್ರಾಹಿಂ ಸ್ವಾಗತಿಸಿದರು. ರಾಮಚಂದ್ರ ಶೆಣೈ ಪ್ರಾರ್ಥಿಸಿದರು. REU_NITTE 24ರ ಸಂಚಾಲಕ ರಾಕೇಶ್ ರಾಮಚಂದ್ರನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆದರ್ಶ್ ಜೋಸೆಫ್ ವಂದಿಸಿದರು. ಶ್ರೀ ಸುಧೀರ್ ಮೆನನ್ ಸಮಾರಂಭವನ್ನು ನಿರೂಪಿಸಿದರು. ಈ ಕಾರ್ಯಕ್ರಮವು ಆಕರ್ಷಕ ಚಟುವಟಿಕೆಗಳು, ನೆಟ್ವರ್ಕಿಂಗ್ ಸೆಷನ್ಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಸರಣಿಯನ್ನು ಒಳಗೊಂಡು ಉತ್ಸಾಹಭರಿತ ಮತ್ತು ರೋಮಾಂಚಕ ಸಂದರ್ಭವಾಗಿತ್ತು. ಹಳೆಯ ವಿದ್ಯಾರ್ಥಿಗಳು ತಮ್ಮ ಬ್ಯಾಚ್ಮೇಟ್ಗಳೊಂದಿಗೆ ಮರುಸಂಪರ್ಕಿಸಲು, ಅವರ ವೃತ್ತಿಪರ ಪ್ರಯಾಣಗಳನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮ ವೇದಿಕೆಯಾಯಿತು. ರಾತ್ರೆ ಭವ್ಯವಾದ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.