ಯಶಸ್ವಿನಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಇಡೀ ದೇಶದ ಆರ್ಥಿಕ ಅಭಿವೃದ್ಧಿ ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂಬುವುದು ಎಲ್ಲರಿಗೂ ಮನದಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಹಕಾರ ಸಚಿವಾಲಯದ ಮೂಲಕವೂ‌ ಸಹಕಾರಿ ಕ್ಷೇತ್ರದಲ್ಲಿ ಅನೇಕ ರೀತಿಯ ಬದಲಾವಣೆ ತರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಸಹಕಾರಿ‌ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರಿಗೆ ಉಡುಪಿಯ ದಿ ಓಷನ್ ಪಾರ್ಲರ್ ಹೋಟೆಲ್ ನಲ್ಲಿ‌ ಇಂದು ಆಯೋಜಿಸಿದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಹುತೇಕ ಸಹಕಾರಿ ಸಂಸ್ಥೆಗಳು ಇಂದು ಆರ್ಥಿಕ‌ ವ್ಯವಹಾರವನ್ನು ಮಾತ್ರ ಮಾಡುತ್ತಿವೆ. ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿಗೆ ಸಂಬಂಧಿಸಿದ ವ್ಯವಹಾರ ಮಾಡುತ್ತಿವೆ. ಉಳಿದ ಸಹಕಾರಿ ಸಂಸ್ಥೆಗಳು ಠೇವಣಿ ತೆಗೆದುಕೊಳ್ಳುವುದು ಸಾಲ ನೀಡುವ ಕೆಲಸ ಮಾಡುತ್ತಿವೆ. ಹೀಗಾಗಿ ಸಹಕಾರಿ ಕ್ಷೇತ್ರಕ್ಕೆ ಬದಲಾವಣೆ ತರುತ್ತಿದ್ದಾರೆ. ವಿವಿದೋದ್ದೇಶ ವ್ಯವಸ್ಥೆಯನ್ನು ಸಹಕಾರಿ‌ ಕ್ಷೇತ್ರದಲ್ಲಿ ತರಬೇಕು. ಎಲ್ಲ ರೀತಿಯ ವ್ಯವಹಾರಗಳು ಸರಕಾರಿ‌ ಕ್ಷೇತ್ರದಿಂದ ಆಗಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸಹಕಾರಿ ಸಚಿವರಾಗಿರುವ ಅಮಿತ್ ಶಾ ಆದೇಶ ಹೊರಡಿಸುತ್ತಿದ್ದಾರೆ ಎಂದರು.

ಬಡ್ತಿಗೆ ಬೇಕಿದ್ದರೆ ಜಿಡಿಸಿ ತರಬೇತಿಯನ್ನು ಪಡೆಯಲೇ ಬೇಕು. ಮುಂದಿನ ದಿನಗಳಲ್ಲಿ ತರಬೇತಿ ಪಡೆದವರಿಗೆ ಮಾತ್ರ ನೇಮಕಾತಿ‌ ಎಂಬ ನಿಯಮವೂ ಬರಬಹುದು. ರಾಜದಲ್ಲಿಯೂ ಸರಕಾರಿ ಕ್ಷೇತ್ರದಲ್ಲಿ ಅನೇಕ ರೀತಿಯ ಬದಲಾವಣೆ ತರಲಾಗುತ್ತಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಸರಕಾರಿ ಸಂಸ್ಥೆ ಮರುಪಾವತಿಯ ಸಾಮರ್ಥ್ಯ, ದಾಖಲೆ ಪಡೆದುಕೊಂಡು ಸಾಲ ನೀಡುವುದರೊಂದಿಗೆ ಜನರ ವಿಶ್ವಾಸ, ನಂಬಿಕೆ ಗಳಿಸಿದೆ. ಜಿಲ್ಲೆಯಲ್ಲಿ ಒಟ್ಟು 3800 ಕೋಟಿ ರೂ ಠೇವಣಿ ಸಹಕಾರಿ ಕ್ಷೇತ್ರದಲ್ಲಿದೆ. ಇದಕ್ಕೆ ಜನರ ವಿಶ್ವಾಸ ನಂಬಿಕೆಯೇ ಕಾರಣ ಎಂದರು.

ಯಶಸ್ವಿನಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಉಡುಪಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಯಲ್ಲಿ ಯಶ್ವಸಿನಿ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು.
ಯಶಸ್ವಿನಿ ಯೋಜನೆ ಪಡೆದರೆ ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ಪ್ರಯೋಜನೆ ಪಡೆದುಕೊಳ್ಳಬಹುದು ಎಂದು ಹೇಳಿದರು.

ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯ, ಉಡುಪಿ ಜಿಲ್ಲಾ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕಿ ರೇಣುಕಾ ಜಿ. ಮಾತನಾಡಿದರು.
ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ನಿರ್ದೇಶಕರಾದ ಎಚ್. ಗಂಗಾಧರ ಶೆಟ್ಟಿ, ಪ್ರಸಾದ್ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಅನಿಲ್ ಎಸ್. ಪೂಜಾರಿ, ಬಿ. ಕರುಣಾಕರ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ಬಿ. ಅರುಣ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

ಉಡುಪಿ ಸೆನ್ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರಾಮಚಂದ್ರ ಹಾಗೂ ಲೆಕ್ಕ ಪರಿಶೋಧಕ ವರುಣ್ ಭಟ್ ಉಪನ್ಯಾಸ ನೀಡಿದರು.ಸದಾನಂದ ಆಚಾರ್ಯ ಪ್ರಾರ್ಥಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿದರು. ನಿರ್ದೇಶಕ ಶ್ರೀಧರ್ ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು.