ಮೂಡುಬಿದರೆ: ಕಾಲೇಜು ವಿದ್ಯಾರ್ಥಿನಿಯ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆ; ತರಗತಿಗೆ ಅಕ್ರಮ ಪ್ರವೇಶಿಸಿ ಕೃತ್ಯ ಎಸೆಗಿದ ಆರೋಪಿ ಸೆರೆ.

ಮೂಡುಬಿದಿರೆ: ಖಾಸಗಿ ಕಾಲೇಜಿಗೆ ಯುವಕನೊಬ್ಬ ತರಗತಿಗೆ ಅಕ್ರಮವಾಗಿ ಪ್ರವೇಶಿಸಿ ವಿದ್ಯಾರ್ಥಿನಿಯ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆಗೈದ ಘಟನೆ ಆ.12 ರಂದ ನಡೆದಿದೆ. ಕೃತ್ಯ ಎಸಗಿದ ಆರೋಪಿ ಮಂಜುನಾಥ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮತ್ತು ಇರಿತಕ್ಕೊಳಗಾದ ವಿದ್ಯಾರ್ಥಿನಿ ತುಮಕೂರಿನವರಾಗಿದ್ದು, ಇಬ್ಬರೂ ಆತ್ಮೀಯರಾಗಿದ್ದರು ಎನ್ನಲಾಗಿದೆ. ಇತ್ತೀಚೆಗೆ ವಿದ್ಯಾರ್ಥಿನಿಯು ಆರೋಪಿ ಮಂಜುನಾಥನ ಮೊಬೈಲ್ ಕರೆಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಳು ಎಂದು ಹೇಳಲಾಗುತ್ತಿದೆ. ಇದರಿಂದ ಹತಾಶೆಗೊಂಡ ಆರೋಪಿಯು ವಿದ್ಯಾರ್ಥಿನಿಯನ್ನು ಹುಡುಕಿಕೊಂಡು ಸೋಮವಾರ ಕಾಲೇಜಿಗೆ ತೆರಳಿ ತರಗತಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಕತ್ತರಿಯಿಂದ ಚುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಡುಬಿದಿರೆ ಠಾಣೆಯಲ್ಲಿ ಆರೋಪಿ ಮಂಜುನಾಥನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.