ಉಡುಪಿ: ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ರಾಜೀನಾಮೆ ಕೊಟ್ಟು, ತನಿಖೆಯನ್ನು ಎದುರಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಅಧಿಕಾರದಲ್ಲಿ ಇರಬಾರದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಹೇಳಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಭಂಡತನವನ್ನು ದೂರ ಮಾಡಬೇಕು. ನೈತಿಕತೆಯ ಸಿದ್ಧಾಂತ ಹೇಳುವ ಅವರು, ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಮೂಡ ಹಗರಣ ಸಂಬಂಧಪಟ್ಟಂತೆ ಮೂರು ಮಂದಿ ಖಾಸಗಿ ವ್ಯಕ್ತಿಗಳು ದೂರು ಕೊಟ್ಟಿದ್ದಾರೆ.
ರಾಜ್ಯಪಾಲರಿಗೆ ಬಿಜೆಪಿ ದೂರು ಕೊಟ್ಟಿಲ್ಲ, ಸಾಮಾಜಿಕ ಕಾರ್ಯಕರ್ತರು ದೂರು ಕೊಟ್ಟಿರುವುದು. ರಾಜ್ಯಪಾಲರು ವಿವರಣೆ ಕೇಳಿದ್ದರೂ ಯಾವುದೇ ವಿವರಣೆಯನ್ನು ಆ ಸಂದರ್ಭ ಮುಖ್ಯಮಂತ್ರಿಗಳು ಅಥವಾ ಸರ್ಕಾರ ಕೊಟ್ಟಿಲ್ಲ. ಕರ್ನಾಟಕದ ರಾಜಕೀಯಕ್ಕೆ ಇತಿಹಾಸ ಮತ್ತು ಪರಂಪರೆ ಇದೆ. ಹೀಗಾಗಿ ಒಂದು ಕ್ಷಣ ಕೂಡ ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಇರಕೂಡದು. ತನಿಖೆಯನ್ನು ಮಾಡುತ್ತೇನೆ ಎಂಬ ನೆಪಗಳನ್ನು ಒಡ್ಡಬಾರದು. ತನಿಖೆಯಾಗಿ ಆರೋಪ ಮುಕ್ತರಾಗುವ ತನಕ ಆ ಕುರ್ಚಿಯನ್ನು ತ್ಯಾಗ ಮಾಡಬೇಕು. ಆರೋಪ ಸಾಬೀತಾಗದಿದ್ದರೆ ನಿರಪರಾಧಿಯಾದರೆ ಹೈಕಮಾಂಡ್ ಅನುಮತಿ ತೆಗೆದುಕೊಂಡು ಮತ್ತೆ ಅವರೇ ಮುಖ್ಯಮಂತ್ರಿಯಾಗಲಿ ಎಂದರು.
ತನಿಖೆಗೆ ಒಳಪಟ್ಟ ನಂತರ ಆ ಸ್ಥಾನದಲ್ಲಿ ಇರುತ್ತೇನೆ ಎಂಬುದು ಸರಿಯಲ್ಲ. ನಾಳೆ ನ್ಯಾಯಾಲಯವನ್ನು ಕೂಡ ಕಾಂಗ್ರೆಸ್ ಪ್ರಶ್ನೆ ಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಎಡೆಮಾಡಿ ಕೊಡಬೇಡಿ. ರಾಜ್ಯಪಾಲರು ಕಾನೂನು ತಜ್ಞರ ಅಭಿಪ್ರಾಯ ಕೇಳಿಯೇ ಈ ನಿರ್ಧಾರಕ್ಕೆ ಬಂದಿರುತ್ತಾರೆ. ಇಂದು ಅಥವಾ ನಾಳೆ ರಾಜೀನಾಮೆ ಕೊಡದಿದ್ದರೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಶಾಸಕರು ಬೆಂಗಳೂರಿನಲ್ಲಿ ಪಕ್ಷ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಿದೆ. ಸೋಮವಾರದಿಂದ ನಾವು ಪ್ರತಿಭಟನೆಗೆ ಇಳಿಯುತ್ತೇವೆ. ಜನಾಂದೋಲನ ಆಗುವ ಮೊದಲು ಜನರು ರಸ್ತೆಗಿಳಿಯುವ ಮೊದಲು ರಾಜೀನಾಮೆ ನೀಡಿ. ಕರ್ನಾಟಕ ಬಹಳ ದೊಡ್ಡ ಪ್ರಮಾಣದ ಪ್ರತಿಭಟನೆ ಎದುರಿಸುವಂತೆ ಮಾಡದಿರಿ ಎಂದು ಹೇಳಿದರು.












