ಮುಂಬಯಿ: ಮುಂಬಯಿ ಪೊಲೀಸರು ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಾಂಗ್ಲಾ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ (30) ಬಂಧಿತ ಆರೋಪಿ.ಆರೋಪಿಯನ್ನು ಠಾಣೆ ಜಿಲ್ಲೆಯ ಹೀರಾನಂದಾನಿ ಎಸ್ಟೇಟ್ ಬಳಿ ಭಾನುವಾರ ಬಂಧಿಸಲಾಗಿದೆ. ಬಾಂದ್ರಾ ಕೋರ್ಟ್, ಆರೋಪಿಯನ್ನು ಐದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
8 ತಿಂಗಳ ಹಿಂದೆಯೇ ಬಾಂಗ್ಲಾ ದೇಶದಿಂದ ಭಾರತ ಪ್ರವೇಶಿಸಿದ್ದ ಬಂಧಿತ ಆರೋಪಿ ಬಿಜೋಯ್ ದಾಸ್, ವಿಜಯ್ ದಾಸ್, ಮೊಹಮ್ಮದ್ ಇಲಿಯಾಸ್ ಎಂದೆಲ್ಲಾ ಹೆಸರು ಬದಲಿಸಿಕೊಂಡು ಓಡಾಡಿಕೊಂಡಿದ್ದ. ಹೌಸ್ ಕೀಪಿಂಗ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಹಣ ಗಳಿಸುವ ಉದ್ದೇಶದಿಂದ ದರೋಡೆ ಮಾಡುತ್ತಿದ್ದ ಎಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.
”ಇದು ನಟನ ಮನೆ ಎಂದು ತಿಳಿದಿರಲಿಲ್ಲ. ಕಳ್ಳತನ ಮಾಡುವುದಷ್ಟೇ ನನ್ನ ಉದ್ದೇಶವಾಗಿತ್ತು. ಜೀವ ಉಳಿಸಿಕೊಳ್ಳಲು ಚಾಕು ಇರಿದು ತಪ್ಪಿಸಿಕೊಂಡು ಓಡಿಹೋಗಿದ್ದೆ” ಎಂದು ಆರೋಪಿಯು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಶನಿವಾರ ಛತ್ತೀಸ್‌ಗಢದಲ್ಲಿ ಬಂಧಿಸಲಾಗಿದ್ದ ಶಂಕಿತ ಆರೋಪಿ ಆಕಾಶ್ ಕನೋಜಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.