ಉಡುಪಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಕೈಮಗ್ಗ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಾ.7ರಿಂದ 9 ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8:30ರವರೆಗೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಮಾ.7ರಂದು ಮಧ್ಯಾಹ್ನ 12:30ಕ್ಕೆ ಉಡುಪಿಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಮೇಳವನ್ನು ಉದ್ಘಾಟಿಸಲಿರುವರು. ಕಾಲೇಜಿನ ಪ್ರಾಂಶು ಪಾಲ ಲಕ್ಷ್ಮೀನಾರಾಯಣ ಕಾರಂತ್ ಭಾಗವಹಿಸಲಿರುವರು. ಚರಕದ ಅಧ್ಯಕ್ಷೆ ಮಹಾಲಕ್ಷ್ಮೀ ಅಧ್ಯಕ್ಷತೆ ವಹಿಸಲಿರುವರು ಎಂದು ಸಂಸ್ಥೆಯ ಮಾರುಕಟ್ಟೆ ಮತ್ತು ವಿನ್ಯಾಸ ವಿಭಾಗ ವ್ಯವಸ್ಥಾಪಕಿ ಪದ್ಮಶ್ರೀ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಮೇಳದಲ್ಲಿ 10 ಮಳಿಗೆಗಳು ಇರಲಿದ್ದು, ಚರಕದ ನೈಸರ್ಗಿಕ ಬಣ್ಣದ ಕೈ ಮಗ್ಗದ ಬಟ್ಟೆಗಳು, ಸಿದ್ಧ ಉಡುಪುಗಳು, ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ಉತ್ತರ ಕರ್ನಾಟಕ ಭಾಗದ ಅಪರೂಪದ ಸೀರೆಗಳಾದ ಗಾಡಿ ದಡಿ, ಗೋಮಿ ದಡಿ, ಚುಕ್ಕಿ ಪರಸ್, ತೊಡೆ ಪರಸ್, ಕಿನ್ನಾಳ ಸೀರೆಗಳು, ಟವೆಲ್ಸ್, ಬೆಡ್ಶೀಟ್ಗಳು, ನೇಕಾರರೇ ನೇಯ್ದ ಬೆಂಗಳೂರಿನ ವಿಶುದ್ದಿಯ ರೇಷ್ಮೆ ಸೀರೆಗಳು, ಟೆರಾಬಾನ್ ಅವರ ಕರಕುಶಲ ಟೆರಾಕೋಟಾ ಮತ್ತು ಮೆಟಲ್ ಆಭರಣಗಳು, ಶಿರಸಿಯ ಚೇತನಾ ಸಂಸ್ಥೆಯ ಬಾಳೆನಾರಿನ ಉತ್ಪನ್ನಗಳು ಮರಳಿ ಮಣ್ಣಿಗೆ ಯವರ ಮಡಿಕೆ-ಕುಡಿಕೆಗಳು, ಸಾವಯವ ಉತ್ಪನ್ನಗಳು, ಸಿರಿಧಾನ್ಯದಿಂದ ತಯಾರಿಸಿದ ವೈವಿಧ್ಯಮಯ ಆಹಾರ ಉತ್ಪನ್ನಗಳು, ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಸೌಂದರ್ಯವರ್ಧಕಗಳು, ಕಾರ್ಕಳದ ತಪಸ್ ಫುಡ್ಸ್ ಮಖಾನ ಉತ್ಪನ್ನಗಳು, ಪುಸ್ತಕ ಮಳಿಗೆಗಳೂ ಇರಲಿವೆ ಎಂದರು.
ಚರಕ ಗ್ರಾಮೀಣ ಮಹಿಳೆಯರ ಸಹಕಾರ ಸಂಘವಾಗಿದ್ದು, ನೈಸರ್ಗಿಕ ಕೈಮಗ್ಗ ಬಟ್ಟೆ ಹಾಗೂ ಸಿದ್ಧವಸ್ತುಗಳ ಉತ್ಪಾದನೆ ಮತ್ತು ಮಾರಾಟಗಳಲ್ಲಿ ಕಳೆದ 29 ವರ್ಷಗಳಿಂದ ತೊಡಗಿಕೊಂಡಿದ್ದೇವೆ. ಪ್ರಸ್ತುತ ಸ್ಥಳೀಯವಾಗಿ ಸುಮಾರು 350 ಜನ ಹಾಗೂ ರಾಜ್ಯದ ಬೇರೆ, ಬೇರೆ ಜಿಲ್ಲೆಗಳ 400 ಜನ ನೇಕಾರರಿಗೆ, ಒಟ್ಟು 750 ಜನರಿಗೆ ಉದ್ಯೋಗ ನೀಡಿದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಿಇಓ ಪೀಟರ್, ಅಧ್ಯಕ್ಷೆ ಮಹಾಲಕ್ಷ್ಮೀ ಉಪಸ್ಥಿತರಿದ್ದರು.












