ಮಹಿಳಾ ಯಕ್ಷಗಾನ ತಂಡಗಳು ಪ್ರಾರಂಭವಾಗುತ್ತಿರುವುದು ಕಲೆಗೆ ಹೆಚ್ಚಿನ ಶಕ್ತಿ ತುಂಬಿದೆ: ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಅಭಿಮತ

ಉಡುಪಿ: ಯಕ್ಷಗಾನ ಕರಾವಳಿಯ ಮಣ್ಣಿನ ಕಲೆ. ಇದರ ಬಗ್ಗೆ ಕೀಳರಿಮೆ ಬಿಟ್ಟು, ಅಬಾಲವೃದ್ಧರಾಗಿ ಯಕ್ಷಗಾನವನ್ನು ಆರಾಧಿಸುವ ಲಕ್ಷಾಂತರ ಮಂದಿ ಯಕ್ಷಗಾನ ಪ್ರೇಮಿಗಳಿದ್ದಾರೆ. ಅದರಲ್ಲೂ ಮಹಿಳಾ ಯಕ್ಷಗಾನ ತಂಡಗಳು ಪ್ರಾರಂಭಗೊಳ್ಳುತ್ತಿರುವುದು ಯಕ್ಷಗಾನ ಕಲೆಗೆ ಹೆಚ್ಚಿನ ಶಕ್ತಿ ತುಂಬಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಮಂಗಳವಾರ ಮಂಗಳೂರಿನ ಸಮತಾ ಮಹಿಳಾ ಬಳಗದ ಆಶ್ರಯದಲ್ಲಿ ಮಂಗಳೂರು ಜೈಲ್ ರೋಡ್‌ನ ಸುಬ್ರಹ್ಮಣ್ಯ ಸಭಾ ಭವನದಲ್ಲಿ ಯಕ್ಷ ಮಂಜುಳಾ ಕದ್ರಿ ಬಳಗದಿಂದ ಮಹಿಳಾ ಯಕ್ಷಗಾನ ಬಯಲಾಟ ‘ಶ್ರೀ ದೇವಿ ಮಹಿಷಮರ್ದಿನಿ ‘ ಪ್ರಸಂಗದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಅಕಾಡೆಮಿ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಈ ಮೂಲಕ ಭವಿಷ್ಯದ ಕಲಾವಿದರನ್ನು ತಯಾರು ಮಾಡುವುದಲ್ಲದೆ, ಯಕ್ಷಗಾನ ವೀಕ್ಷಣೆಗೆ ಪ್ರೇಕ್ಷಕರಿಲ್ಲ ಎಂಬ ಕೊರಗು ತಪ್ಪುತ್ತದೆ. ತಾನು ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದಾಗ ಪ್ರೌಢಶಾಲೆಗಳಲ್ಲಿ ಆರಂಭಿಸಿದ ಯಕ್ಷ ಶಿಕ್ಷಣ ಇಂದು ಉಡುಪಿ ಜಿಲ್ಲೆಯ ೯೦ಕ್ಕೂ ಆಧಿಕ ಶಾಲೆಗಳಿಗೆ ವ್ಯಾಪಿಸಿದೆ. ೩೦೦೦ ಕ್ಕೂ ಆಧಿಕ ಮಕ್ಕಳು ಗಂಡುಹೆಣ್ಣು ಬೇಧವಿಲ್ಲದೆ ಈ ಕಲೆಯನ್ನು ಅಭ್ಯಾಸಿಸುತ್ತಿದ್ದಾರೆ. ಇದರಿಂದ ಅವರ ಶೈಕ್ಷಣಿಕ ಪ್ರಗತಿ ಕೂಡಾ ಹೆಚ್ಚಾಗಿರುವುದನ್ನು ಗಮನಿಸಿದ್ದೇವೆ ಎಂದು ಅವರು ತಿಳಿಸಿದರು.

ಯಕ್ಷಗಾನ ಇಂದು ಕೇವಲ ಗಂಡು ಕಲೆಯಾಗಿ ಉಳಿದಿಲ್ಲ. ಮಹಿಳಾ ಕಲಾವಿದರು ಕೂಡಾ ಈ ಕಲೆಯನ್ನು ಅಭ್ಯಾಸಿಸಿ ಮಿಂಚುತ್ತಿದ್ದಾರೆ. ಪ್ರಸ್ತುತ ಯಕ್ಷ ಶಿಕ್ಷಣದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಿಯರು ತರಬೇತಿ ಪಡೆಯುತ್ತಿರುವುದು ಈ ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಹೆಜ್ಜೆ. ಈ ನಿಟ್ಟಿನಲ್ಲಿ ಸಮತಾ ಮಹಿಳಾ ಬಳಗದಂತಹ ಮಹಿಳಾ ಸಂಘಟನೆಗಳು ಮಹಿಳಾ ಕಲಾವಿದರುಗಳನ್ನು ಒಳಗೊಂಡ ಯಕ್ಷಗಾನ ತಂಡಗಳಿಗೆ ಪ್ರೋತ್ಸಾಹ ನೀಡಿದರೆ, ಇನ್ನಷ್ಟು ಕಲಾವಿದರಿಗೆ ಬದುಕಿಗೊಂದು ಆಧಾರ ಸಿಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಮತಾ ಬಳಗದ ಅಧ್ಯಕ್ಷೆ ಸುಧಾ ವಿ.ರಾವ್, ಯಕ್ಷ ಮಂಜುಳಾ ಕದ್ರಿ ಅಧ್ಯಕ್ಷೆ ಪೂರ್ಣಿಮಾ ಪ್ರಭಾಕರ ರಾವ್,
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೊಪ್ಪಲ ಮೋಹನ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.