ಮಹಾರಾಷ್ಟ್ರ: ವೈದ್ಯಕೀಯ ಲೋಕವನ್ನೇ ವಿಸ್ಮಯಗೊಳಿಸಿದ ಪ್ರಕರಣ 3 ದಿನದ ಗಂಡು ಮಗುವಿನ ಹೊಟ್ಟೆಯಿಂದ ಎರಡು ಭ್ರೂಣಗಳು ಹೊರಗೆ!

ಅಮರಾವತಿ/ಬುಲ್ಧಾನ: ವೈದ್ಯಕೀಯ ಲೋಕದ ವಿಸ್ಮಯಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಅತ್ಯಂತ ಅಪರೂಪದ ‘ಭ್ರೂಣದೊಳಗೆ ಭ್ರೂಣ’ ಇರುವುದು ಪತ್ತೆಯಾಗಿತ್ತು. ಕೆಲವೇ ದಿನಗಳಲ್ಲಿ ಹೆರಿಗೆಯ ನಂತರ ಆಕೆಯ ಮೂರು ದಿನದ ಮಗುವಿನ ಹೊಟ್ಟೆಯಿಂದ ಎರಡು ಭ್ರೂಣಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬುಲ್ಧಾನಾದ 32 ವರ್ಷದ ಮಹಿಳೆಯ ಗರ್ಭದಲ್ಲಿದ್ದ ಮಗುವಿನಲ್ಲಿ ಅತ್ಯಪರೂಪದ ಜನ್ಮಜಾತ ವೈಪರೀತ್ಯ ಪತ್ತೆಯಾಗಿದ್ದು, ಕಳೆದ ತಿಂಗಳು ನಿಯಮಿತ ಆರೋಗ್ಯ ತಪಾಸಣೆಯ ಭಾಗವಾಗಿ ಸೋನೋಗ್ರಫಿಗೆ ಒಳಗಾದಾಗ, ಭ್ರೂಣದ ದೇಹದೊಳಗೆ ವಿರೂಪಗೊಂಡ ಭ್ರೂಣಗಳಿರುವುದು ಪತ್ತೆಯಾಗಿದ್ದವು.ಫೆಬ್ರವರಿ 1 ರಂದು ಬುಲ್ಧಾನ ಮಹಿಳಾ ಆಸ್ಪತ್ರೆಯಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಣಂತಿ ಮತ್ತು ಮಗುವನ್ನು ಅಮರಾವತಿ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ನುರಿತ ವೈದ್ಯರಾದ ಡಾ ಉಷಾ ಗಜ್ಭಿಯೆ ಮತ್ತು ತಂಡ ನವಜಾತ ಶಿಶುವಿನ ಹೊಟ್ಟೆಯಿಂದ ಎರಡು ಭ್ರೂಣಗಳನ್ನು ತೆಗೆದುಹಾಕಲು ಸವಾಲಿನ ಶಸ್ತ್ರಚಿಕಿತ್ಸೆ ನಡೆಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಗಜ್ಭಿಯೆ, ಮೂರು ದಿನದ ಮಗುವಿನ ಹೊಟ್ಟೆಯಲ್ಲಿ ಕೈ ಮತ್ತು ಕಾಲುಗಳಂತ ರಚನೆ ಹೊಂದಿದ್ದ ಎರಡು ಅವಳಿ ಭ್ರೂಣಗಳಿದ್ದವು.ಶಸ್ತ್ರಚಿಕಿತ್ಸೆಯ ಮೂಲಕ ಅವುಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ಈಗ ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ.

ಮಹಿಳೆ 35 ವಾರಗಳ ಗರ್ಭಿಣಿಯಾಗಿದ್ದಾಗ ಸೋನೋಗ್ರಫಿ ನಡೆಸಿದಾಗ ವಿಚಾರ ತಿಳಿದು ಬಂದಿತ್ತು. ಬುಲ್ಧಾನ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞ ಡಾ ಪ್ರಸಾದ್ ಅಗರ್ವಾಲ್ ಅವರು ಕಳೆದ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಭ್ರೂಣದೊಳಗೆ ಭ್ರೂಣ’ ಅಪರೂಪದ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಒಂದಾಗಿದೆ, ಇದು ಐದು ಲಕ್ಷ ಪ್ರಕರಣಗಳಲ್ಲಿ ಒಂದಾಗಿದೆ. ಭಾರತದಲ್ಲಿ 10-15 ಪ್ರಕರಣಗಳು ಸೇರಿದಂತೆ, ಇದುವರೆಗೆ ವಿಶ್ವದಾದ್ಯಂತ ಇಂತಹ ಸುಮಾರು 200 ಪ್ರಕರಣಗಳು ಮಾತ್ರ ವರದಿಯಾಗಿವೆ” ಎಂದು ವಿವರ ನೀಡಿದ್ದರು.

“ಮಗುವಿನಲ್ಲಿ ಅಸಾಮಾನ್ಯವಾದುದನ್ನು ಗಮನಿಸುವಷ್ಟು ಅದೃಷ್ಟಶಾಲಿ ಮತ್ತು ಜಾಗರೂಕನಾಗಿದ್ದೆ, ಕೆಲವು ಮೂಳೆಗಳು ಮತ್ತು ಅದರ ಹೊಟ್ಟೆಯಲ್ಲಿ ಭ್ರೂಣದಂತಹ ರಚನೆಯೊಂದಿಗೆ ಸಂಪೂರ್ಣವಾಗಿ ಸಾಮಾನ್ಯವಾಗಿ ಬೆಳೆಯುತ್ತಿರುವ ಭ್ರೂಣವನ್ನು ಗಮನಿಸಲು ಸಾಧ್ಯವಾಯಿತು. ಸಾಮಾನ್ಯವಲ್ಲ ಎಂದು ನನಗೆ ತತ್ ಕ್ಷಣವೇ ತಿಳಿಯಿತು. ಕೂಡಲೇ ಎರಡನೇ ಅಭಿಪ್ರಾಯವನ್ನು ಕೇಳಿದೆವು. ರೇಡಿಯಾಲಜಿಸ್ಟ್ ಡಾ.ಶ್ರುತಿ ಥೋರಟ್ ಅವರು ಪ್ರಕರಣವನ್ನು ದೃಢಪಡಿಸಿದರು” ಎಂದು ಡಾ ಅಗರ್ವಾಲ್ ತಿಳಿಸಿದ್ದರು.