ಉಡುಪಿ: ಫೆಂಗಲ್ ಚಂಡಮಾರುತದ ಪರಿಣಾಮ ಅರಬಿ ಸಮುದ್ರದಲ್ಲಿ ಗಾಳಿ ಒತ್ತಡ ಮತ್ತು ಅಲೆಗಳ ಅಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ನಡೆಸಲಾಗದೆ ದೋಣಿಗಳು ದಡ ಸೇರಿವೆ.
ಬಲವಾದ ಗಾಳಿಗೆ ಸಮುದ್ರ ಮಧ್ಯೆ ದೊಡ್ಡಗಾತ್ರದ ಅಲೆಗಳು ಬರುತ್ತಿರುವುದರಿಂದ ಪರ್ಸಿನ್, ಸಣ್ಣಟ್ರಾಲ್ ಬೋಟ್ ಹಾಗೂ ನಾಡದೋಣಿಗಳು ಮೀನುಗಾರಿಕೆ ನಡೆಸಲಾಗದೆ ದಡ ಸೇರಿವೆ. ಕೆಲವು ಆಳಸಮುದ್ರದ ಬೋಟುಗಳು ಕಾರವಾರ ಸಹಿತ ಸಮೀಪದ ಬಂದರನ್ನು ಪ್ರವೇಶಿಸಿವೆ.
ಈಗಾಗಲೇ ಮೀನುಗಾರಿಕೆ ಮುಗಿಸಿ ಬಂದ ಬೋಟುಗಳು ಮತ್ತೆ ಸಮುದ್ರಕ್ಕೆ ಇಳಿದಿಲ್ಲ. ಸೋಮವಾರ ಮಲ್ಪೆ ಬಂದರಿನಲ್ಲಿ ಶೇ. 100 ಪರ್ಸಿನ್ ಮತ್ತು ನಾಡದೋಣಿಗಳು ಮೀನುಗಾರಿಕೆ ನಡೆಸದೇ ದಡ ಸೇರಿವೆ.ಗಾಳಿ ಉತ್ತರ ವಾಯವ್ಯದಿಂದ ಬೀಸುತ್ತಿದ್ದು, ಸೋಮವಾರ ದಕ್ಷಿಣ ಪೂರ್ವದ ಕಡೆಗೆ ಸಾಗಿದೆ. ಇದು ಗಂಟೆಗೆ 50ರಿಂದ 60 ಕಿ.ಮೀ. ವೇಗದಲ್ಲಿ ಬೀಸುತ್ತಿದೆ.