ಮನು ಸಂವಿಧಾನದ ವಿರುದ್ಧ ಅಂಬೇಡ್ಕರ್ ಸಂವಿಧಾನ ಮಾತ್ರ ನಮ್ಮ ರಕ್ಷಿಸಲು ಸಾಧ್ಯ

ಉಡುಪಿ: ಇಂದು ದೇಶ ಸಂದಿಗ್ಧ ಸ್ಥಿತಿಯಲ್ಲಿದೆ. ಗಾಂಧಿಯನ್ನು ಕಳೆದುಕೊಂಡ ಈ ದೇಶ ಅನಾಥವಾಗಿ ಹೋಗಿದೆ. ಇಡೀ ದೇಶವನ್ನು ಜಾತಿಧರ್ಮ ಮೀರಿ ಒಂದಾಗಿಸುವಲ್ಲಿ ಗಾಂಧಿ ಹೋರಾಟ ಮಾಡಿದರು. ಈ ಸಮಾಜದಲ್ಲಿನ ಜಾತೀಯತೆ ದೂರವಾಗ ಬೇಕೆಂದು ಧ್ವನಿ ಎತ್ತಿದ್ದ ಗಾಂಧಿಯನ್ನು ಅದೇ ಧ್ವೇಷದಿಂದ ಗುಂಡಿಟ್ಟು ಕೊಲ್ಲಲಾಯಿತು. ಆ ಮೂಲಕ ನಾವು ಮಹಾನ್ ತ್ಯಾಗಿಯನ್ನು ಕಳೆದುಕೊಂಡಿದ್ದೇವೆ ಎಂದು ಕೆಪಿಸಿಸಿ ವಕ್ತಾರ ನಿಕೇತ್‌ ರಾಜ್ ಮೌರ್ಯ ಹೇಳಿದ್ದಾರೆ.

ಗಾಂಧಿ ಭಾರತ ಹಿರಿಯಡ್ಕ ಇದರ ಆಶ್ರಯದಲ್ಲಿ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಧ್ಯೇಯವಾಕ್ಯದಡಿ ಹಿರಿಯಡಕದ ಶ್ರೀವೀರಭದ್ರ ದೇವಸ್ಥಾನದ ಆವರಣದಲ್ಲಿ ಗುರುವಾರ ಆಯೋಜಿಸಲಾದ ಗಾಂಧಿ ಭಾರತ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಅಂಬೇಡ್ಕರ್ ಸಂವಿಧಾನ ಉಳಿದರೆ ಮಾತ್ರ ಈ ದೇಶದಲ್ಲಿ ಸಮಾನತೆ ಉಳಿಯಲು ಸಾಧ್ಯವಾಗುತ್ತದೆ. ಆದರೆ ಈ ಸಂವಿಧಾನವನ್ನು ದುರ್ಬಲಗೊಳಿಸಲು ಅನೇಕ ಪ್ರಯತ್ನಗಳು ಇಂದು ನಡೆಯುತ್ತಿವೆ. ಮನು ಸಂವಿಧಾನವನ್ನು ಮತ್ತೆ ತರಲು ಹೊರಟಿದ್ದಾರೆ. ಅದರ ವಿರುದ್ಧ ಅಂಬೇಡ್ಕರ್ ಸಂವಿಧಾನ ಮಾತ್ರ ನಮ್ಮ ರಕ್ಷಿಸಲು ಸಾಧ್ಯ. ಆದುದರಿಂದ ಅಂಬೇಡ್ಕರ್ ಸಂವಿಧಾನವನ್ನು ನಮ್ಮ ಮಕ್ಕಳಿಗೆ ತಿಳಿಸಿ ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಚರಕವನ್ನು ತಿರುಗಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದ ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿ, ಇತಿಹಾಸವನ್ನೇ ತಿಳಿದುಕೊಳ್ಳದವರು ಇಂದು ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ. ಇವರು ಯಾರು ಕೂಡ ಸಂವಿಧಾನವನ್ನು ಓದಿಯೇ ಇಲ್ಲ. ಬದಲಾದ ಸಂವಿಧಾನವನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. ನಮ್ಮ ಸಂವಿಧಾನ ಜನರಿಗೆ ನೀಡುವ ಗೌರವ ಬೇರೆ ಯಾವುದೇ ಸಂವಿಧಾನ ನೀಡಲು ಅಸಾಧ್ಯ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸಂವಿಧಾನವನ್ನು ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಹಿಂದು ರಾಷ್ಟ್ರದ ಸಂವಿಧಾನ ಸಿದ್ಧ ಪಡಿಸಲಾಗಿದೆ. ನಮ್ಮ ಸಂವಿಧಾನ ನಮಗೆ ರಕ್ಷಣೆ ಕೊಟ್ಟಿದೆ ಮತ್ತು ಆರ್ಥಿಕ ಶಕ್ತಿ ನೀಡಿದೆ. ಆದುದರಿಂದ ಆ ಸಂವಿಧಾನವನ್ನು ಉಳಿಸುವ ಕಾರ್ಯ ಮಾಡಬೇಕು. ಅದಕ್ಕೆ ನಾವೆಲ್ಲ ಕಟಿಬದ್ಧರಾಗಬೇಕು. ಎರಡನೇ ಸ್ವಾತಂತ್ರ್ಯ ಹೋರಾಟದ ಮೂಲಕವಾದರೂ ಸಂವಿಧಾನವನ್ನು ಉಳಿಸುವ ಹೋರಾಟಕ್ಕೆ ನಾವೆಲ್ಲ ಸಿದ್ಧರಾಬೇಕು ಎಂದರು.
ನ್ಯಾಯವಾದಿ ಸುಧೀರ್ ಮರೋಳಿ ಮಾತನಾಡಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಎಂ.ಎ.ಗಫೂರ್, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ವರೋನಿಕಾ ಕರ್ನೆಲಿಯೋ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಲಾಲ್, ನವೀನ ಚಂದ್ರ ಸುವರ್ಣ, ರಮೇಶ್ ಕಾಂಚನ್, ಮಲ್ಪೆ ರಾಘವೇಂದ್ರ, ಇಸ್ಮಾಯಿಲ್ ಆತ್ರಾಡಿ, ಸರ್ಫುದ್ದೀನ್ ಶೇಕ್ ಮೊದಲಾದವರು ಉಪಸ್ಥಿತರಿದ್ದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಂತ ರಾವ್ ಸ್ವಾಗತಿಸಿದರು. ಸಮಾವೇಶದ ಸಂಚಾಲಕ ಉದ್ಯಾವರ ನಾಗೇಶ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.