ಮಂಗಳೂರು: ಸೈನಿಕರ ಹೋರಾಟವನ್ನು ಗೌರವಿಸಬೇಕು ಮತ್ತು ತಮ್ಮ ಜೀವನದಲ್ಲಿ ಸ್ವಯಂ ಶಿಸ್ತುನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಹೇಳಿದರು.
ದೇಶಕ್ಕಾಗಿ ಹೋರಾಟದಲ್ಲಿ ಪಾಲ್ಗೊಂಡ ಸೈನಿಕ ರಂಗಪ್ಪ ಅವರ ಯಶೋಗಾಥೆಯನ್ನು ವಿದ್ಯಾರ್ಥಿಗಳಿಗೆ ವಿವರಿಸುತ್ತ ಭಾರತೀಯರಾದ ನಾವು ದೇಶದ ಕಾನೂನನ್ನು ಗೌರವಿಸುವ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ನಮಗೆ ದೇಶ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ದೇಶಕ್ಕೆ ಏನು ಕೊಟ್ಟಿದ್ದೇನೆ ಎನ್ನುವುದನ್ನು ನಾವು ವಿಮರ್ಶಿಸಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನು ಸಾಧಿಸಲು ಯಾವುದು ನೆರವಾಗುವುದೋ ಅದೇ ವಿದ್ಯೆ. ನಮ್ಮ ಪೂರ್ವಜರು ವಿಶಾಲಹೃದಯಿಗಳು ಯಾಕೆಂದರೆ ಸಮಸ್ತ ವಿಶ್ವವನ್ನೇ ತಮ್ಮ ಕುಟುಂಬವೆಂದು ಭಾವಿಸಿದ ಪುಣ್ಯಾತ್ಮರು. ಶಿಕ್ಷಣ ಮನುಷ್ಯನಿಗೆ ವಿಶ್ವವಿಶಾಲ ಹೃದಯವನ್ನು ನೀಡಬೇಕು. ಆಗ ಮಾತ್ರ ನಾವು ಭಾರತವನ್ನು ವಿಶ್ವಗುರುವಿನ
ಸ್ಥಾನಕ್ಕೆ ಒಯ್ಯಬಲ್ಲೆವು. ಸ್ವಾತಂತ್ರ್ಯೋತ್ತರದ ಅವಧಿಯಲ್ಲಿ ಪ್ರಾಮಾಣಿಕವಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸದೆ, ಭ್ರಷ್ಟರಾಗಿ, ಅಪ್ರಾಮಾಣಿಕರಾಗಿ, ಅಪ್ರಾಯೋಗಿಕರಾಗಿ, ಆಲಸಿಗಳಾಗಿ ಸಮಯವನ್ನು ವ್ಯರ್ಥ ಮಾಡುತ್ತಾ ಬಂದಿದ್ದೇವೆ. ಇನ್ನಾದರೂ ನಾವು ನಮ್ಮನ್ನು ಈ ದೇಶಕ್ಕೋಸ್ಕರ ಅರ್ಪಿಸಲು ಮುಂದಾಗಬೇಕು. ಜವಬ್ದಾರಿಯುತ ಮಾನವನಾಗಿ ಬದುಕಬೇಕು ಎಂದು ಅವರು ಮಂಗಳೂರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೋ.ನರೇಂದ್ರ ಎಲ್. ನಾಯಕ್ ಅವರು ವಹಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಪ್ರಜ್ಞೆಯ ಮೂಲಕ ದೇಶ ಸೇವೆಯನ್ನು ನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್ ನಾಯಕ್ ಅವರು ನೂತನವಾಗಿ ಆಯ್ಕೆಯಾದ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಭೋದಿಸುವ ಮೂಲಕ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಅಂಕುಶ್ ಎನ್ ನಾಯಕ್, ವಾಸ್ತುತಜ್ಞೆ ದೀಪಿಕಾ ಎ ನಾಯಕ್, ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರಾಮಚಂದ್ರ ಭಟ್ ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ನವನೀತ್ ಪೈ, ಪ್ರಾಚಿ ಅವರು ಕಾರ್ಯಕ್ರಮ ನಿರೂಪಿಸಿದರು. 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ವೈಷ್ಣವಿ ಪುತ್ರನ್, ಕಾರ್ಯದರ್ಶಿಯಾಗಿ ಥ್ವಿಶಾ ಆರ್ ಆಚಾರ್ಯ, ಉಪಾಧ್ಯಕ್ಷರಾಗಿ ಪೂರಬ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ಪ್ರಣೀತಾ ಅವರು ಅಧಿಕಾರ ಸ್ವೀಕರಿಸಿದರು.












