ಮಂಗಳೂರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು: ಪ್ರಥಮ ಪಿ.ಯು.ಸಿ. ಹಾಸ್ಟೆಲ್ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮ.

ಮಂಗಳೂರು: ವಿದ್ಯಾರ್ಥಿಗಳು ಸರಿಯಾದ ಯೋಜನೆ, ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಹಾಗೂ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಪಥ ತಲುಪಲು ಸಾಧ್ಯ. ಜೀವನದಲ್ಲಿ ಯಶಸ್ವಿಯಾಗಲು ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು ಎಂದು ಎಕ್ಸ್ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಪ್ರೊ.ನರೇಂದ್ರ ಎಲ್. ನಾಯಕ್‍ ರವರು ತಿಳಿಸಿದರು.

ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಆಯೋಜಿಸಿದ ಓರಿಯಂಟೇಶನ್-2024 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನರಿತು ಸಮಯವ್ಯರ್ಥ ಮಾಡದೇ ಸ್ವಯಂ ಶಿಸ್ತುಬದ್ಧತೆಯೊಂದಿಗೆ ಗಂಭೀರವಾಗಿ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ತಮಗೆ ಸಿಗುವ ಪ್ರತಿಯೊಂದು ಸಣ್ಣ ಅವಕಾಶಗಳನ್ನು ಕೂಡ ವ್ಯರ್ಥಮಾಡಿಕೊಳ್ಳಬಾರದು. ಪೋಷಕರು ತಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ವಿದ್ಯಾರ್ಥಿಯು ಶೈಕ್ಷಣಿಕ ಉತ್ಕೃಷ್ಟತೆ ಸಾಧಿಸಲು ಅವರ ಪರಿಶ್ರಮದೊಂದಿಗೆ ಪೋಷಕರ ಪ್ರೋತ್ಸಾಹ ಬಹಳ ಮುಖ್ಯ. ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು ಹಾಗೂ ಹೊಸ ಶೈಕ್ಷಣಿಕ ವಾತಾವರಣವನ್ನು ಸಕಾರಾತ್ಮಕ ಮನಸ್ಸಿನೊಂದಿಗೆ ಪ್ರಾರಂಭಿಸಿ ಎಂದು ಶುಭ ಹಾರೈಸಿದರು.

ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ-ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಅಂಕುಶ್. ಎನ್. ನಾಯಕ್ ರವರು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತಂತ್ರಜ್ಞಾನದ ಬಳಕೆಯ ಕುರಿತು , ಶೈಕ್ಷಣಿಕ ಹಂತದಲ್ಲಿ ತಂತ್ರಜ್ಞಾನದ ಸರಿಯಾದ ಬಳಕೆ ಮಾಡುವುದರ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳ ಮುಂದಿನ ಗುರಿ ತಲುಪುವಲ್ಲಿ ಪೋಷಕರು ಜವಾಬ್ದಾರಿ ಹೊಂದಿರುತ್ತಾರೆ ಎಂದರು.

ಎ.ಐ.ಸಿ.ಇ. ವಿಭಾಗದ ಸಂಯೋಜಕರಾದ ಪ್ರೊ. ಶ್ಯಾಮ್‍ಪ್ರಸಾದ್ ಎಸ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಜೆಇಇ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ, ಆ ಪರೀಕ್ಷೆಗೆ ನಮ್ಮನ್ನು ತಯಾರಿಗೊಳಿಸುವ ಬಗೆ , ಕಾಲೇಜಿನ ವಿವಿಧ ಕೋರ್ಸ್‍ನ ಕುರಿತು, ಆ ಕೋರ್ಸ್‍ನಿಂದ ಲಭ್ಯವಾಗುವ ಅವಕಾಶ ಹಾಗೂ ಸಾಧ್ಯತೆ ಕುರಿತು ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾಲೇಜಿನ ಶೈಕ್ಷಣಿಕ ಸಮಿತಿಯ ಸದಸ್ಯರಾದ ಶ್ರೀ. ಬಿ. ವಿನಯ್ ಕುಮಾರ್ ಇವರು 2024-25 ಶೈಕ್ಷಣಿಕ ಸಾಲಿನ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಸಂಕ್ಷಿಪ್ತವಾಗಿ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅರ್ಥೈಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಹಾಸ್ಟೆಲ್‍ನ ವಿದ್ಯಾರ್ಥಿಗಳು ಹಾಗೂ ಪೋಷಕರು ಕಡ್ಡಾಯವಾಗಿ
ಅನುಸರಿಸಬೇಕಾದ ಕೆಲವೊಂದು ನಿಬಂಧನೆಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದ ಸಂಯೋಜಕಿಯಾದ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿಯಾದ ರಾಧಿಕಾ ಭಟ್ ಹಾಗೂ ಕಾಲೇಜಿನ ಇತರ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಅನುಷಾ ಕೆ ಕಾರ್ಯಕ್ರಮ ನಿರೂಪಿಸಿದರು. ಈ
ಕಾರ್ಯಕ್ರಮವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಯಾದ, ಹಿಂದಿ ವಿಭಾಗದ ಉಪನ್ಯಾಸಕಿಯಾದ ಅಶ್ವಿನಿ ಪೈ ಅವರು ವಂದಿಸಿದರು.