ಮಂಗಳೂರಿನಲ್ಲಿ ಸಾಹಿತ್ಯ ಅಕಾಡೆಮಿಯಿಂದ ‘ಕವಿಸಂಧಿ’ ವಿನೂತನ ಕಾರ್ಯಕ್ರಮ.

ಮಂಗಳೂರು: ಸಾಹಿತ್ಯ ಅಕಾಡೆಮಿ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹಾಗೂ ಕವಿತಾ ಟ್ರಸ್ಟ್ ವತಿಯಿಂದ ಇಲ್ಲಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಭಾನುವಾರ (ಮೇ 26) ’ಕವಿಸಂಧಿ’ ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮ ನಡೆಯಿತು. ಖ್ಯಾತ ಕೊಂಕಣಿ ಕವಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೀಲ್ಬಾ ಖಂಡೇಕಾರ್ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದರು.

ಕಾವ್ಯ ಕ್ಷೇತ್ರದಲ್ಲಿನ ತಮ್ಮ ಪಯಣವನ್ನು ವಿವರಿಸುತ್ತಾ ನೀಲ್ಬಾ ಖಂಡೇಕರ್ ಅವರು, “ನನ್ನಲ್ಲಿ ಬರವಣಿಗೆಯ ಪ್ರತಿಭೆ ಇತ್ತು. ಈ ಪ್ರತಿಭೆಯ ಜೊತೆಗೆ ನಾನು ಜೀವನದ ಸತ್ಯಗಳನ್ನು ಅರಿತು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಾಗ ನನ್ನ ಬರವಣಿಗೆಯನ್ನು ಸಾಹಿತ್ಯಾಸಕ್ತರು ಗುರುತಿಸಲು ಆರಂಭಿಸಿದರು. ನನ್ನಲ್ಲಿದ್ದ ಓದುವಿಕೆಯ ಅಭ್ಯಾಸವು ನನಗೆ ಪ್ರಪಂಚದ ಆಗುಹೋಗುಗಳ ಬಗ್ಗೆ ಮಾಹಿತಿಯನ್ನು ನೀಡಿತು. ಇದರ ಫಲವಾಗಿ ನನ್ನ ಕೃತಿಗಳಲ್ಲಿ ಚಾರಿತ್ರಿಕ ಘಟನೆಗಳನ್ನು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಪ್ರತಿಬಿಂಬಿಸಲು ಸಾಧ್ಯವಾಯಿತು.ಈ ಪ್ರಕಾರ ನಾನು ಸಮಾಜದ ಆಗುಹೋಗುಗಳ ಒಳಿತು ಮತ್ತು ದೋಷಗಳನ್ನು ಓದುಗರ ಮುಂದೆ ತಲುಪಿಸಲು ಮುಂದಾದೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಘಟನೆಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ಪ್ರಗತಿಪರ ಚಿಂತನೆ ಮತ್ತು ಮೂಲಭೂತ ಆಚರಣೆಗಳ ನಡುವಿನ ವ್ಯತ್ಯಾಸವನ್ನು ನಾನು ಅರಿತುಕೊಂಡೆ. ಜೊತೆಗೆ ಮಹಾತ್ಮ ಗಾಂಧಿಯವರ ಬೋಧನೆಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದವು. ದಾಭೋಲ್ಕರ್, ಗೌರಿ ಲಂಕೇಶ್ ಮತ್ತು ಎಂ ಎಂ ಕಲಬುರ್ಗಿನ್ನು ಅರಗಿಸಿಕೊಂಡದ್ದು ನನ್ನ ಸಾಹಿತ್ಯ ಜೀವನದ ಮೈಲುಗಲ್ಲು ಎಂದು ಹೇಳಲು ನನಗೆ ಹೆಮ್ಮೆಯಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ನಂದಗೋಪಾಲ್ ಶೆಣೈ ಕವಿಸಂಧಿ ಕಾರ್ಯಕ್ರಮಕ್ಕೆ ವಿಶ್ವ ಕೊಂಕಣಿ ಕೇಂದ್ರವನ್ನು ಆಯ್ಕೆ ಮಾಡಿದ್ದಕ್ಕಾಗಿ ಸಾಹಿತ್ಯ ಅಕಾಡೆಮಿಗೆ ಧನ್ಯವಾದ ಅರ್ಪಿಸಿದರು. ಸಾಹಿತ್ಯ ಅಕಾಡೆಮಿ, ಕೊಂಕಣಿ ವಿಭಾಗದ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್, ಅವರು ಸಭೆಯನ್ನು ಸ್ವಾಗತಿಸಿ, ನೀಲ್ಬಾ ಖಂಡೇಕರ್ ಅವರನ್ನು ಸಭಿಕರಿಗೆ ಪರಿಚಯಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಲಹಾ ಮಂಡಳಿಯ ಸದಸ್ಯರಾದ ಹೆಚ್ ಎಂ ಪೆರ್ನಾಳ್ ಅವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನೀಲ್ಬಾ ಅವರೊಂದಿಗೆ ಖ್ಯಾತ ಕೊಂಕಣಿ ಕವಯಿತ್ರಿ ಸ್ಮಿತಾ ಶೆಣೈ ಚರ್ಚೆಯಲ್ಲಿ ಭಾಗವಹಿಸಿದ್ದರು.

ಕವಿತಾ ಟ್ರಸ್ಟ್‌ನ ಅಧ್ಯಕ್ಷರಾದ ಕಿಶೂ ಬಾರ್ಕೂರು, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹಾಗೂ ಕವಿತಾ ಟ್ರಸ್ಟ್ ನ ಟ್ರಸ್ಟಿಗಳು ಹಾಗೂ ಕೊಂಕಣಿ ಸಾಹಿತಾಸಕ್ತರು ಕಾರ್ಯಕ್ರದಲ್ಲಿ ಭಾಗವಹಿಸಿದರು. ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿಯ ಸದಸ್ಯರಾದ ಸ್ಟ್ಯಾನಿ ಬೇಳ ಕಾರ್ಯಕ್ರಮವನ್ನು ನಿರೂಪಿಸಿದರು.