ಭ್ರಷ್ಟಾಚಾರ ವಿರೋಧಿ ಜಾಗೃತಿಗೊಂದು ದಿನ:ಭ್ರಷ್ಟಾಚಾರ ಮುಕ್ತವಾಗಲಿ ಸಮಾಜ -ಇದು ಉಡುಪಿxpress ಕಳಕಳಿ

ಭ್ರಷ್ಟಾಚಾರ ಇಂದಿನ ದಿನಗಳಲ್ಲಿ ಜಾಗತಿಕ ಸಮಸ್ಯೆಯಾಗಿದೆ. ಲಂಚ ಕೊಡದೇ ಯಾವ ಕೆಲಸಗಳೂ ಸಾಗುವುದಿಲ್ಲ ಎಂಬ ಕಹಿಸತ್ಯ ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಈ ಭ್ರಷ್ಟಾಚಾರವೆಂಬ ಭೂತವನ್ನು ಹೊಡೆದೋಡಿಸಲು ಸಾಧ್ಯವೇ ಇಲ್ಲ ಎಂಬುದೂ ಇಂದಿನ ದುಸ್ಥಿತಿ. ಆದರೂ ಜಾಗತಿಕವಾಗಿ ಭ್ರಷ್ಟಾಚಾರವನ್ನು ತಡೆಗಟ್ಟಬೇಕೆಂಬ ಉದ್ದೇಶದಿಂದ ಡಿಸೆಂಬರ್ 9 ನ್ನು ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಸಾರ್ವಜನಿಕರಿಗೆ ಭ್ರಷ್ಟಾಚಾರದ ಕುರಿತು ಅರಿವು ನೀಡಲು, ಭ್ರಷ್ಟಾಚಾರ ತಡೆಗಟ್ಟಲು ಜನಸಾಮಾನ್ಯರ ಪಾತ್ರ ಬಹಳಾ ಮಹತ್ವದ್ದು ಎಂದು ತಿಳಿಹೇಳುವ ಉದ್ದೇಶದಿಂದ ಅಕ್ಟೋಬರ್ 2003ರಲ್ಲಿ ನಡೆದ ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ನಲ್ಲಿ, ಪ್ರತಿವರ್ಷ ಈ ದಿನವನ್ನು ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸುವ ತೀರ್ಮಾನ ಮಾಡಲಾಯಿತು.

ಭ್ರಷ್ಟಾಚಾರ ಒಂದು ದೇಶದ ಅಭಿವೃದ್ಧಿಗೆ ತುಂಬಾ ಮಾರಕವಾಗಿದೆ. ಇದರಿಂದ ದೇಶದ ಆರ್ಥಿಕತೆಗೂ ಬಲವಾದ ಹೊಡೆತ ಬೀಳತ್ತೆ. ಜನರ ಸಮಸ್ಯೆಗಳ ಪರಿಹಾರವೂ ತುಂಬಾ ನಿಧಾನಗತಿಯಲ್ಲಿ ಸಾಗುತ್ತದೆ. ಮನುಷ್ಯನಿಗೆ ಅತಿ ಅಗತ್ಯವಾದ ಶಿಕ್ಷಣದಿಂದ ಹಿಡಿದು ಆರೋಗ್ಯ ಕ್ಷೇತ್ರದವರೆಗೂ ಇದು ವಿಸ್ತರಿಸಿರುವುದು ಶೋಚನೀಯ ಸಂಗತಿ.

ಲಂಚ ಪಡೆದುಕೊಳ್ಳುವುದು ಎಷ್ಟು ತಪ್ಪೋ ಹಾಗೇ ಲಂಚ ಕೊಡುವುದೂ ಅಷ್ಟೇ ತಪ್ಪು ಅನ್ನೋದನ್ನ ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಭ್ರಷ್ಟಾಚಾರ ಮುಕ್ತ ಸಮಾಜದತ್ತ ಪಣತೊಡಬೇಕಿದೆ. ನಮ್ಮ ಕೈಲಾದ ಬದಲಾವಣೆಗೆ ನಾವು ಕಾರಣೀಭೂತರಾದರೆ ಸಮಾಜದ ಬದಲಾವಣೆಗೆ ಒಂದಂಶವಾದರೂ ಕೊಡುಗೆ ನೀಡಿದಂತಾಗುತ್ತದೆ.