ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಕೋಟ್ಯಾಂತರ ರೂ. ಅವ್ಯವಹಾರದ ತನಿಖೆ ವಿಳಂಬ ಖಂಡಿಸಿ ಉಡುಪಿ ಜಿಲ್ಲಾ ರೈತ ಸಂಘದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಉಡುಪಿ: ಬ್ರಹ್ಮಾವರದ ದ.ಕ.ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2021-2022ರ ನಡುವೆ ನಡೆದ 14 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅವ್ಯವಹಾರದ ವಿರುದ್ಧ ಕ್ರಮಕ್ಕೆ ಪ್ರತಿ ಹಂತದಲ್ಲೂ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಿವಿಧ ರೈತ ಪರ ಸಂಘಟನೆಗಳು ಶನಿವಾರದಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗೇಟಿನ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿವೆ.

Oplus_131072

ಧರಣಿ ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಾಜಿ ಶಾಸಕ, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಅವರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಹಗರಣ ನಡೆದು ಎರಡೂವರೆ ವರ್ಷ ಆಗಿದೆ. ತನಿಖೆಯಲ್ಲಿ ಯಾವುದೇ ಪ್ರಗತಿ ಇಲ್ಲ. ಈ ಪ್ರಕರಣದಲ್ಲಿ ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗದ ವೈಫಲ್ಯ ಏನು ಎಂಬುವುದನ್ನು ಜನರಿಗೆ ತಿಳಿಸಬೇಕು. ಈ ಹಗಲು ದರೋಡೆ ಪ್ರಕರಣವನ್ನು‌ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಮಾಡುತ್ತೇವೆ ಎಂದರು.

Oplus_131072

ದ.ಕ. ಜಿಲ್ಲಾ ಸಕ್ಕರೆ ಕಾರ್ಖಾನೆಯ ಸದಸ್ಯರು, ವಿವಿಧ ರೈತ ಪರ ಸಂಘಟನೆಗಳು, ಸಹಕಾರಿ ಕ್ಷೇತ್ರದ ಪ್ರಮುಖರು, ಪಂಚಾಯತ್‌ ರಾಜ್ ಒಕ್ಕೂಟದ ಪ್ರತಿನಿಧಿಗಳು, ಪ್ರಾಂತೀಯ ರೈತ ಸಂಘ ಮೊದಲಾದ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ಧರಣಿಯಲ್ಲಿ ಪಾಲ್ಗೊಂಡಿದ್ದವು.

ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ, ಕಂಬದಕೋಣೆ ಸಹಕಾರಿ ಪತ್ತಿನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ರೈತ ಮುಖಂಡರಾದ ಸದಾನಂದ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಭೋಜ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು