ಬ್ರಹ್ಮಾವರ: ರೋಟರ್ಯಾಕ್ಟ್ ಪದಾಧಿಕಾರಿಗಳ ತರಬೇತಿ ‘ಹೊಂಗನಸು’ – 2024

ಬ್ರಹ್ಮಾವರ: ರೋಟರಿ ಜಿಲ್ಲೆ 3182 ಇದರ ರೋಟರಾಕ್ಟ್ ಕ್ಲಬ್‌ಗಳ ಪದಾಧಿಕಾರಿಗಳ ತರಬೇತಿ ಕಮ್ಮಟ ‘ಹೊಂಗನಸು-2024’ ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ರೋಟರಾಕ್ಟ್ ಕ್ಲಬ್ ಬ್ರಹ್ಮಾವರ ಆತಿಥ್ಯದಲ್ಲಿ ಬ್ರಹ್ಮಾವರದ ರೋಟರಿ ಸಮಾಜ ಮಂದಿರದಲ್ಲಿ ಜರುಗಿತು.

ಕಾರ್ಯಕ್ರಮವನ್ನು ರೋಟರಿ ಗವರ್ನರ್ ಸಿ.ಎ. ದೇವಾನಂದ್ ಉದ್ಘಾಟಿಸಿ ಮಾತನಾಡಿ
ರೋಟರಾಕ್ಟ್ ಸದಸ್ಯರು ಭವಿಷ್ಯದ ನಾಯಕರು ಅವರು ತರಬೇತಿ ಮೂಲಕ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿ ನಿಯೋಜಿತ ಗವರ್ನರ್ ಬಿ. ಎಂ. ಭಟ್ ಮಾತನಾಡಿ ಹೊಸ ರೋಟರಾಕ್ಟ್ ಕ್ಲಬ್‌ಗಳನ್ನು ಪ್ರಾಯೋಜಿಸುವಂತೆ ರೋಟರಿ ಕ್ಲಬ್‌ಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಚೇತನ್‌ ಕುಮಾರ್ 2024-25ನೇ ಸಾಲಿನ ಜಿಲ್ಲಾ ಕಾರ್ಯಕ್ರಮದ ಸಂಪೂರ್ಣ ಚಿತ್ರಣವನ್ನು ತಿಳಿಸಿದರು. ಜಿಲ್ಲಾ ರೋಟರಾಕ್ಟ್ ಬುಲೆಟಿನ್ ‘ಕನೆಕ್ಟ್’ನ್ನು ಬಿಡುಗಡೆಗೊಳಿಸಲಾಯಿತು. ನಿಕಟಪೂರ್ವ ಜಿಲ್ಲಾ ರೋಟರಾಕ್ಟ್ ಪ್ರತಿನಿಧಿ ಮಹಾಲಸ ಕಿಣಿ ‘ಕೊಸ್ಟ್ ಟು ಕೊಸ್ಟ್’ ಕಾರ್ಯಕ್ರಮದ ಸಮಗ್ರ ಮಾಹಿತಿ ನೀಡಿದರು.

ಬ್ರಹ್ಮಾವರ ರೋಟರಿ ಅಧ್ಯಕ್ಷ ಶ್ರೀಧರ ವಿ. ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಜಿಲ್ಲಾ ರೋಟರಾಕ್ಟ್ ಸಭಾಪತಿ ನವೀನ್ ಅಮೀನ್ ಶಂಕರಪುರ, ಜಿಲ್ಲಾ ಕಾರ್ಯದರ್ಶಿ ಶಂಕರ್ ಕುಡ್ಡ, ಬ್ರಹ್ಮಾವರ ರೋಟರಾಕ್ಟ್ ಸಭಾಪತಿ ಜಗದೀಶ್ ಕೆಮ್ಮಣ್ಣು, ಉಪಜಿಲ್ಲಾ ಪ್ರತಿನಿಧಿ ಸುಧಾ ಭಟ್‌ ಉಪಸ್ಥಿತರಿದ್ದರು. ಬ್ರಹ್ಮಾವರ ರೋಟರಾಕ್ಟ್ ಅಧ್ಯಕ್ಷೆ ಅಮೃತಾ ವಂದಿಸಿದರು. ಕಾರ್ತಿಕ್ ಬಾಸ್ರಿ ನಿರೂಪಿಸಿದರು.