ಬ್ರಹ್ಮಾವರದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸಲು ಬಜೆಟ್ ನಲ್ಲಿ ಅನುದಾನ ಒದಗಿಸಿ; ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಗ್ರಹ

ಉಡುಪಿ: ಬ್ರಹ್ಮಾವರದಲ್ಲಿ ಕೃಷಿ ಮಹಾವಿದ್ಯಾಲಯ ಸ್ಥಾಪಿಸಲು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅನುದಾನ ಒದಗಿಸಿ ಅನುಮೋದನೆ ನೀಡುವಂತೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಗ್ರಹಿಸಿದೆ.

ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ಮಾತನಾಡಿ, ಬ್ರಹ್ಮಾವರದಲ್ಲಿ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪಿಸುವುದು ಕರಾವಳಿ ಭಾಗದ ಉಭಯ ಜಿಲ್ಲೆಗಳ ರೈತರ ಬಹುದಿನದ ಬೇಡಿಕೆಯಾಗಿದೆ. ಪ್ರಸ್ತುತವಿರುವ ಡಿಪ್ಲೋಮಾ ಕಾಲೇಜನ್ನು ಉನ್ನತೀಕರಿಸಿ ಕೃಷಿ ಮಹಾವಿದ್ಯಾಲಯವನ್ನಾಗಿ ಪರಿವರ್ತಿಸುವುದು ಈ ಭಾಗದ ರೈತರ ಮಕ್ಕಳ ಬಹುದಿನದ ಬೇಡಿಕೆ ಎಂದರು.

ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗು ಡಿಪ್ಲೋಮಾ ಕಾಲೇಜುಗಳು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದ ರೈತರ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಸುಮಾರು 350 ಎಕರೆಯಷ್ಟು ಜಮೀನಿದ್ದು, ಕೃಷಿ ಸಂಶೋಧನೆ ಹಾಗು ವಿಸ್ತರಣಾ ಚಟುವಟಿಕೆಗಳು ಚಾಲ್ತಿಯಲ್ಲಿದೆ ಎಂದು ಹೇಳಿದರು.

ಕರಾವಳಿಯ ಮೂರು ಜಿಲ್ಲೆಗಳಾದ ದ.ಕ, ಉಡುಪಿ, ಉ.ಕ ಜಿಲ್ಲೆಗಳನ್ನೊಳಗೊಂಡಂತೆ ಯಾವುದೇ ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯವಿಲ್ಲ. ಈ ಭಾಗದ ವಿದ್ಯಾರ್ಥಿಗಳು ಹಾಗು ರೈತರ ಮಕ್ಕಳಿಗೆ ಕೃಷಿ ವಿಜ್ಣಾನದಲ್ಲಿ ಪದವಿ ವ್ಯಾಸಂಗ ಮಾಡಿ, ಪದವಿ ಪಡೆಯಲು ಹಿನ್ನಡೆಯಾಗುತ್ತಿದೆ. ಬ್ರಹ್ಮಾವರದಲ್ಲಿರುವ ಡಿಪ್ಲೋಮಾ ಕಾಲೇಜಿನಲ್ಲಿ ಸುಸಜ್ಜಿತವಾದ ಕಾಲೇಜ್ ಕಟ್ಟಡ, ಪ್ರಯೋಗ ಶಾಲೆ, ವಿದ್ಯಾರ್ಥಿ ನಿಲಯ ಸೌಲಭ್ಯ, ಪೀಠೋಪಕರಣಗಳು, ಇತರೆ ಮೂಲಭೂತ ಸೌಕರ್ಯ, ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಲಭ್ಯವಿದ್ದು, ಸರ್ಕಾರಕ್ಕೆ ಅರ್ಥಿಕ ಹೊರೆಯಾಗದಂತೆ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪಿಸಲು ಅವಕಾಶವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರದೀಪ್ ಹೆಬ್ಬಾರ್, ವೈಕುಂಠ ಹೇರ್ಳೆ ಉಪಸ್ಥಿತರಿದ್ದರು.