ಬೈಂದೂರು: ಜನ ಸಾಮಾನ್ಯರು ಜನಸ್ಪಂದನ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಿ – ಗುರುರಾಜ್ ಗಂಟಿಹೊಳೆ

ಬೈಂದೂರು: ಜನ ಸಾಮಾನ್ಯರು ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಜನಸ್ಪಂದನ ಕಾರ್ಯಕ್ರಮ ಉತ್ತಮ ಅವಕಾಶವಾಗಿದೆ ಇದನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಅವರು ಬುಧವಾರ ಬೈಂದೂರು ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೈಂದೂರು ತಾಲೂಕು ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜನ ಸಾಮಾನ್ಯರ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಲವು ವರ್ಷಗಳಿಂದ ಕಚೇರಿ ಅಲೆದಾಡಿದರು ಬಗೆಹರಿದಿಲ್ಲ, ಇಂತಹ ಸಮಸ್ಯೆಗಳನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ಪರಿಹರಿಸಿಕೊಳ್ಳಲು ಉತ್ತಮ ಅವಕಾಶವಿದೆ, ಕಾರಣ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸೇರಿದಂತೆ ಜಿಲ್ಲಾಧಿಕಾರಿಗಳು ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ವಿವಿಧ ಇಲಾಖೆಯ ಸಮನ್ವಯದೊಂದಿಗೆ ಬಗೆಹರಿಸುವಂತಹ ಸಮಸ್ಯೆಗಳನ್ನು ಪರಿಹಾರ ಪಡೆದುಕೊಳ್ಳಲು ಒಂದು ಅವಕಾಶವಾಗಿದೆ. ಕಳೆದ ಬೈಂದೂರು ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ 160 ಕ್ಕೂ ಹೆಚ್ಚು ಅಹವಾಲುಗಳು ಜನರು ಸಲ್ಲಿಸಿದ್ದರು ಅವುಗಳಲ್ಲಿ ಶೇ.90 ರಷ್ಟು ವಿಲೇವಾರಿಯಾಗಿದೆ. ಅಧಿಕಾರಿಗಳು ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಜನರ ವಿಶ್ವಾಸ ಹೆಚ್ಚಲಿ ಎಂದರು.

ನೆರೆಗೆ ಮಳೆಯೊಂದೇ ಕಾರಣವಲ್ಲ, ಸಾಮಾನ್ಯವಾಗಿ ಅಧಿಕಾರಿಗಳು ಮಳೆಗೆ ಕಾರಣವೆನ್ನುತ್ತಾರೆ ಆದರೆ ವಾಸ್ತವವಾಗಿ ಮನುಷ್ಯನೇ ಇದಕ್ಕೆ ಕಾರಣ ಹೊಳೆ ಹಾಗೂ ನೀರು ಹರಿಯುವ ತೋಡುಗಳನ್ನು ಅತಿಕ್ರಮಣದಿಂದ ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಠಿಗೊಳ್ಳುತ್ತದೆ. ಇದರಿಂದ ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸಿಕೊಂಡು ಬರುತ್ತಿದ್ದು, ನೆರೆ ಪರಿಹಾರಕ್ಕಾಗಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಹಾಗೂ ಮಳೆಗಾಲ ಮುಗಿದ ನಂತರ ಭವಿಷ್ಯದಲ್ಲಿ ನೆರೆ ಸಂಭವಿಸದಂತೆ ಪರಿಹಾರ ಕಂಡುಕೊಳ್ಳಲು ಚರ್ಚಿಸಿ ಬಗೆಹರಿಸುವುದು ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ವಿವಿಧ ಸೇವೆ ಹಾಗೂ ಸವಲತ್ತುಗಳಿಗೆ ಸಾರ್ವಜನಿಕರು ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಜನರ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಜನಸ್ಪಂದನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸಾರ್ವಜನಿಕರಿಂದ ಸ್ಪೀಕೃತಗೊಂಡ ಮನವಿ ಹಾಗೂ ಕುಂದು ಕೊರತೆಗಳ ಅರ್ಜಿಯನ್ನು ಅಲ್ಪಕಾಲದಲ್ಲಿಯೇ ಪರಿಹಾರ ಒದಗಿಸಲಾಗುವುದು. ಅಲ್ಲದೇ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್‌ಲೈನ್ ಮೂಲಕ ಪರಿಶೀಲಿಸಲು ಅನುಕೂಲ ವಾಗುವಂತೆ ಐ.ಪಿ.ಜಿ.ಆರ್.ಎಸ್ ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದರು.

ಜಿಲ್ಲಾ ಮಟ್ಟದಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಕ್ರಮ ಕೈಗೊಳ್ಳಲಾಗುವುದು, ಅನುದಾನ ಬಿಡುಗಡೆ ಹಾಗೂ ಇನ್ನೀತರ ರಾಜ್ಯ ಮಟ್ಟದಲ್ಲಿ ಬಗೆಹರಿಯುವಂತಹ ಸಮಸ್ಯೆಗಳು ಸ್ಪೀಕೃತಗೊಂಡರೆ ಅಂತಹ ಸಮಸ್ಯೆಗಳ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ಪಿಂಚಣೆ ಯೋಜನೆ, ಅಪಾಯಕಾರಿ ಮರ ತೆರವು, ರಸ್ತೆ ದುರಸ್ತಿ ಹಾಗೂ ಇನ್ನೀತರ ಸಮಸ್ಯೆಗಳ ಕುರಿತು ಮುಕ್ತವಾಗಿ ಹೇಳುವುದರ ಮೂಲಕ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದ ಅವರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವುದರೊಂದಿಗೆ ಪ್ರತಿಯೊಬ್ಬರಿಗೂ ಜನಸ್ಪಂದನದ ಕುರಿತು ಮಾಹಿತಿ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಸಹಾಯಕ ಕಮೀಷನರ್ ರಶ್ಮಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 147 ಅರ್ಜಿಗಳು ಸ್ವೀಕೃತವಾಗಿದ್ದು, ರಸ್ತೆ, ಮನೆ ಮಂಜೂರು, ಚರಂಡಿ ವ್ಯವಸ್ಥೆ, ಗೋಶಾಲೆ ನಿರ್ಮಾಣ, ಕುಡಿಯುವ ನೀರು ಸರಬರಾಜಿನಲ್ಲಿ ಉಪ್ಪು ನೀರು ತಡೆ ಬಗ್ಗೆ, ಸ್ಮಶಾನ ಜಾಗ ಮಂಜೂರು, ಹಕ್ಕುಪತ್ರ, ಕೆರೆ ಅಭಿವೃದ್ಧಿ ಸೇರಿದಂತೆ ಹಲವು ಅಹವಾಲುಗಳು ಸಲ್ಲಿಕೆಯಾಗಿದ್ದವು.