ಬೆಳ್ತಂಗಡಿ: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಸಿರಿಬಾಗಿಲು ಗ್ರಾಮದ ಪುಲ್ಲೊಟ್ಟೆ ನಿವಾಸಿ ಬಾಬು ಅವರ ಪತ್ನಿ ಲೀಲಾವತಿ (35) ಮೃತಪಟ್ಟವರು. ಕೂಲಿ ಕಾರ್ಮಿಕರಾಗಿದ್ದ ಲೀಲಾವತಿ ಅವರಿಗೆ ನಾಲ್ಕೈದು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಆರಂಭದಲ್ಲಿ ಕ್ಲಿನಿಕ್ವೊಂದರಿಂದ ಚಿಕಿತ್ಸೆ ಪಡೆದುಕೊಂಡಿದ್ದರು.
ಜ್ವರ ಉಲ್ಭಣಿಸಿದ ಹಿನ್ನೆಲೆಯಲ್ಲಿ ಅ.25ರಂದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಅಲ್ಲಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ, ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಅ.27ರಂದು ಬೆಳಗ್ಗೆ ನಿಧನರಾದರು ಎಂದು ತಿಳಿದುಬಂದಿದೆ.