ಬೆಂಗಳೂರು: ಬದಲಾಗುತ್ತಿದೆ ಊಟದ ಟ್ರೆಂಡ್‌ ; ಚೈನೀಸ್‌, ಉ. ಭಾರತದ ಅಡುಗೆಗೆ ಬಾರಿ ಡಿಮ್ಯಾಂಡ್‌ ; ಕಾಶ್ಮೀರಿ ಪಲಾವ್‌, ಫ್ಲೋಟಿಂಗ್‌ ಇಡ್ಲಿಗೆ ಬೇಡಿಕೆ

ಬೆಂಗಳೂರು: ವಿವಾಹ ಭೋಜನವಿದು… ವಿಚಿತ್ರ ಭಕ್ಷ್ಯಗಳಿವು… ಬೀಗರಿಗೆ ಔತಣವಿದು… ಮಾಯಾ ಬಜಾರ್‌ ಸಿನಿಮಾದ ಈ ಹಾಡು ಯಾರಿಗೆ ನೆನಪಿಲ್ಲ. ಮದುವೆ ಇತ್ಯಾದಿ ಶುಭ ಸಮಾರಂಭಗಳು ಅದ್ಧೂರಿಯಾದಂತೆ ಊಟ-ತಿಂಡಿಯೂ ನಾವೀನ್ಯತೆ ಪಡೆದುಕೊಳ್ಳುತ್ತಿದೆ.

ಒಂದು ಕಾಲದಲ್ಲಿ ಮನೆಯಲ್ಲೇ ಮದುವೆ ಮಾಡುವ ಪರಿಪಾಠವಿತ್ತು. ಮನೆಯವರು, ಊರಿನ ನೆರೆಹೊರೆಯವರೇ ಬಾಣಿಸಿಗರಾಗಿ ಅಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ವಿಶೇಷವಾದ ಅಡುಗೆ ಮಾಡಿ ಸಂಭ್ರಮಿಸುವ ಕಾಲವದು. ಆದರೆ ಇದೀಗ ಕಾಲಕ್ಕೆ ತಕ್ಕಂತೆ ಮದುವೆ ಮಹೋತ್ಸವದ ಊಟೋಪಚಾರಗಳೂ ಬದಲಾಗಿವೆ. ಮದುವೆ ಕೇಟರಿಂಗ್‌ ದೊಡ್ಡಮಟ್ಟ ದಲ್ಲಿ ಬೆಳೆಯುತ್ತಿದೆ. ಅಭಿರುಚಿಗೆ ತಕ್ಕಂತೆ ರುಚಿಕಟ್ಟಾದ ಹೊಸ ಆಹಾರಗಳು ಮೆನು ಪಟ್ಟಿಗೆ ಸೇರ್ಪಡೆಗೊಳ್ಳುತ್ತಿದ್ದು, ಜನರು ಮದುವೆ ಊಟ ಹಾಕುವುದನ್ನು ಪ್ರೆಸ್ಟೀಜ್‌ ಆಗಿರುವುದರಿಂದ ಕೇಟರಿಂಗ್‌ ಉದ್ಯಮ ಮತ್ತಷ್ಟು ಬಲಗೊಂಡಿದೆ.

ಮದುವೆ ಎಂದರೆ ಬಾಳೆ ಎಲೆ ಊಟ ಎನ್ನುವ ಕಾಲವೊಂದಿತ್ತು. ಆಗ ಪಾಯಸ, ಕೋಸಂಬರಿ, ಪಲ್ಯ, ಉಪ್ಪು, ಉಪ್ಪಿನ ಕಾಯಿ, ಅನ್ನ, ಸಾಂಬಾರ್‌ ಜತೆಗೆ ಒಂದೆರಡು ಸಿಹಿ ಖಾದ್ಯವಿದ್ದರೆ ಅದೇ ಹೆಚ್ಚು. ಈಗ ಮದುವೆ ಮುಗಿದರೂ ಊಟದ ಮಾತು ಮುಗಿಯುವುದಿಲ್ಲ. ಮೆನು ಏನೇನಿತ್ತು ಎಂಬುದೇ ಚರ್ಚೆಯಾಗುತ್ತಿದೆ.

ಮಾಮೂಲಿ ತಿಂಡಿ-ಊಟಗಳನ್ನು ಕೈ ಬಿಟ್ಟು ಚೈನೀಸ್‌, ಉತ್ತರ ಭಾರತದ ಆಹಾರ ಸೇರಿದಂತೆ ತರಹೇವಾರಿ ತಿನಿಸುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ವರ್ಷದಿಂದ ವರ್ಷಕ್ಕೆ ಆಹಾರದ “ಟ್ರೆಂಡ್‌ ‘ ಹಾಗೂ “ಕಾಂಬೋ’ ಬದಲಾಗುತ್ತಿದ್ದು, ಉತ್ತರ ಕರ್ನಾಟಕ, ಕರಾವಳಿ ಭಾಗದ ಆಹಾರ, ದಕ್ಷಿಣ ಭಾರತದ ಆಹಾರ ಸೇರಿದಂತೆ ದೇಶದ ಎಲ್ಲಾ ಭಾಗದ ಆಹಾರಗಳೂ ಮೆನುವಿನಲ್ಲಿ ಬರಲಿವೆ. ಕಾಂಬೋ ಆಫ‌ರ್‌ಗಳು ಬಾಳೆ ಎಲೆ ಊಟದ ಪದ್ಧತಿಯನ್ನು ಆಕ್ರಮಿಸಿಬಿಟ್ಟಿದೆ.

ವಿಶೇಷವಾಗಿ 2 ಬಗೆಯ ಸೂಪ್‌, ಹಲವಾರು ವಿಧದ ಸಲಾಡ್ಸ್‌, ತಿಂಡಿ ತಿನಿಸುಗಳು, ಮಸಾಲೆ ದೋಸೆ ಜೊತೆಗೆ ದಾವಣಗೆರೆ ದೋಸೆಗೂ ಬೇಡಿಕೆಯಿದೆ.ತಟ್ಟೆ ಇಡ್ಲಿ, ಫ್ಲೋಟಿಂಗ್‌ ಇಡ್ಲಿ (ಇಡ್ಲಿಗೆ ನೀರಾಗಿರುವ ಚಟ್ನಿಯನ್ನು ಸುರಿಯುವುದು) ಜತೆಗೆ 25 ವಿಧದ ಚಟ್ನಿ ಪುಡಿ ಸೇರಿಸಿ ಭೋಜನಪ್ರಿಯರಿಗೆ ಉಣಬಡಿಸುವ ಆಹಾರಕ್ಕೂ ಹೆಚ್ಚಿನ ಬೇಡಿಕೆಯಿದೆ. ಯಾವ ಸ್ಟಾರ್‌ ಹೋಟೆಲ್‌ಗ‌ಳ ಮೆನುವಿಗೂ ಕಡಿಮೆಯಿಲ್ಲದಂತೆ ಮದುವೆ ಊಟೋಪಚಾರಗಳು ನಡೆಯುತ್ತಿವೆ ಎಂದು ಕೇಟರಿಂಗ್‌ ಮಾಲಿಕರು ಹೇಳುತ್ತಾರೆ.

ವೆಲ್ಕಂ ಡ್ರೀಂಕ್ಸ್‌, ಕಾಶಿ ಹಲ್ವ, ಒಣ ಹಣ್ಣಿನ ದೋಸೆ, ಪನ್ನೀರ್‌ ದೋಸೆ, ಚೈನೀಸ್‌ ದೋಸೆ , ಗಾರ್ಲಿಕ್‌ ನೂಡೆಲ್ಸ್‌, ಕಾಶ್ಮೀರಿ ಪಲಾವ್‌, ಸ್ಯಾಂಡ್‌ವಿಚ್‌, ವೆಜ್‌ ಬರ್ಗರ್‌, ಪನೀರ್‌ ಸ್ಯಾಂಡ್‌ವಿಚ್‌, ಉತ್ತರದ ಭಾರತದ ಮೆನುನಲ್ಲಿ ಆಲೂ ಗೊಬಿ, ಡ್ರೈ ಜಾಮೂನ್‌ ಸೇರಿದಂತೆ ಹಲವು ಐಟಂಗಳು ಸೇರ್ಪಡೆಯಾಗಿವೆ ಎಂದು ತಿಳಿಸುತ್ತಾರೆ.

2,500 ರೂ.ಗೆ ಒಂದು ಊಟ: ಮದುವೆಗೆ ಸೇರುವ ಜನ ಹಾಗೂ ಮೆನುವಿನ ಮೇಲೆ ಕೇಟರಿಂಗ್‌ ಸರ್ವಿಸ್‌ನ ಶುಲ್ಕಗಳೂ ನಿಗದಿಯಾಗುತ್ತವೆ. ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಂತಹ ಸ್ಥಳಗಲ್ಲಿ ವಿವಾಹದ 1 ಊಟಕ್ಕೆ 2,500 ರೂ.ಶುಲ್ಕ ವಿಧಿಸಲಾಗುತ್ತದೆ ಎಂದು ಬೆಂಗಳೂರು ಹೋಟೆಲ್‌ ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌ ಹೇಳುತ್ತಾರೆ.

ಮದುವೆ ಎಂದರೆ 50 ನಮೂನೆಯ ಊಟ, 100 ಬಗೆಯ ತಿನಿಸುಗಳನ್ನು ಪರಿಚಯಿಸಿದ್ದು, 15-20 ವರ್ಷಗಳ ಹಿಂದೆ 1 ಊಟಕ್ಕೆ 400-500 ರೂ. ಇದ್ದದ್ದು ಈಗ ದುಪ್ಪಟ್ಟಾಗಿದೆ. ದಿನದಿಂದ ದಿನಕ್ಕೆ ಊಟದ ಮೆನುಗಳ ಐಟಂ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಗಾಯತ್ರಿ ವಿಹಾರ್‌ನ ಪಂಕಜ್‌ ಕೊಟಾರಿ ಅವರು.

ಕೇಟರಿಂಗ್‌ ಉದ್ಯಮದ ವಹಿವಾಟು ಶೇ.5 ಏರಿಕೆ:

ಕೇಟರಿಂಗ್‌ ಉದ್ಯಮ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.5ರಷ್ಟು ಹೆಚ್ಚಳವಾಗಿದೆ ಎಂದು ರಾಜ್ಯ ಹೋಟೆಲ್‌ ಮಾಲಿಕರ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್‌ ಹೆಬ್ಟಾರ್‌ ಹೇಳುತ್ತಾರೆ. ಕೇಟರಿಂಗ್‌ ವ್ಯವಹಾರ ಈ ವರ್ಷ ಇಂತಿಷ್ಟೇ ನಡೆದಿದೆ ಎಂದು ಲೆಕ್ಕಹಾಕಲಾಗದು. ಆದರೆ ಬೆಂಗಳೂರಿನಲ್ಲಿ ಹಲವು ಸಂಖ್ಯೆಯಲ್ಲಿ ಕೇಟರಿಂಗ್‌ಗಳಿದ್ದು ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುತ್ತದೆ. ಇತ್ತೀಚೆಗೆ ಮದುವೆ ಊಟದ ಶೈಲಿ ಕೂಡ ಬದಲಾಗಿದೆ. ಮಧ್ಯಾಹ್ನದ ವೇಳೆ ದಕ್ಷಿಣ ಭಾರತದ ಖಾದ್ಯಗಳಿಗೆ ಬೇಡಿಕೆ ಹೆಚ್ಚಿದೆ. ಸಂಜೆ ವೇಳೆ ಉತ್ತರ ಭಾರತದ ಚಾಟ್ಸ್‌ ಸೇರಿದಂತೆ ಆಹಾರ ಖಾದ್ಯಗಳಿಗೆ ಬೇಡಿಕೆಯಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿರುಚಿ ಹೊಂದಿರುವುದರಿಂದ ಒಂದು ಸಮಾರಂಭದಿಂದ ಮತ್ತೂಂದು ಸಮಾರಂಭಕ್ಕೆ ಕಾಂಬೋ ಬದಲಾವಣೆ ಆಗುತ್ತಲೇ ಇರುತ್ತದೆ ಎಂದು ಹೇಳುತ್ತಾರೆ.

ಮದುವೆ ಕೇಟರಿಂಗ್‌ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಎಲ್ಲಾ ರೀತಿಯ ಆಹಾರ ಖಾದ್ಯಗಳು ಮೆನು ಪಟ್ಟಿ ಸೇರಿವೆ. ಸಂಪ್ರದಾಯಿಕ ಆಹಾರಗಳನ್ನು ಇಷ್ಟಪಡುವ ವರ್ಗದ ಜತೆಗೆ ಭಿನ್ನ ರೀತಿಯ ಆಹಾರ ಇಷ್ಟಪಡುವ ವರ್ಗವೂ ಸೇರಿದೆ. ಹಲವು ಜನರಿಗೆ ಕೇಟರಿಂಗ್‌ ಉದ್ಯೋಗ ನೀಡಿದೆ. ನಾಲ್ಕೈದು ವರ್ಷಕ್ಕೆ ಹೋಲಿಕೆ ಮಾಡಿದರೆ ಕೇಟರಿಂಗ್‌ ಉದ್ಯಮ ದುಪ್ಪಟ್ಟಾಗಿ ಬೆಳೆದಿದೆ. ಹೊಸ ಟ್ರೆಂಡ್‌ ಶುರುವಾಗಿದೆ.