ಉಡುಪಿ: ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಚಾರ ಹಾಗೂ ಡಿಕೆಶಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ವಿಷಯಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ಪಕ್ಷದ ಒಳಜಗಳಕ್ಕೂ ನಮಗೂ ಸಂಬಂಧ ಇಲ್ಲ. ಅದು ಅವರ ಆಂತರಿಕ ವಿಚಾರ. ಆದರೆ, ಅವರು ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕಾರು ಗುಂಪುಗಳಿವೆ ಎನ್ನುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ಬಾಗಿಲು ಎನ್ನುತ್ತಿದ್ದರು. ಕಾಂಗ್ರೆಸ್ ಒಡೆದು ಹೋಗಿದೆ ಚೂರು ಚೂರು ಆಗಿದೆ ಎನ್ನುತ್ತಿದ್ದರು.
ಈಗ ನಾವು ಕೂಡ ಅವರನ್ನು ಕೇಳಬಹುದಲ್ವಾ. ಏನಪ್ಪಾ ನಿಮ್ಮ ಪಕ್ಷ ಹೇಗಿದೆ ಎಷ್ಟು ಚೂರಾಗಿದೆ ಎಂದು ಕೇಳಬಹುದಲ್ವಾ?. ಬಿಜೆಪಿಯಲ್ಲಿ ಎಷ್ಟು ಬಾಗಿಲುಗಳಿವೆ ಎಂದು ಕೇಳಬಹುದು. ಆದರೆ ನಾನು ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಹೆಚ್ಚು ಟೀಕೆ ಟಿಪ್ಪಣಿ ಮಾಡಲು ಹೋಗಲ್ಲ ಎಂದು ಹೇಳಿದರು.
ನಾನು ಯಾವುದೇ ರಾಜಕೀಯ ಹೇಳಿಕೆ ನೀಡಲು ಹೋಗುವುದಿಲ್ಲ. ಎಐಸಿಸಿ ಅಧ್ಯಕ್ಷರು ಮತ್ತು ಕೆಪಿಸಿಸಿ ಅಧ್ಯಕ್ಷರು ಸಾರ್ವಜನಿಕವಾಗಿ ರಾಜಕೀಯ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದಾರೆ ಎಂದರು.