ಬದುಕಿಗೆ ಬೆಳಕು ತುಂಬುವ ಹಬ್ಬ ದೀಪಾವಳಿ. ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
ದೀಪಾವಳಿಯ ಬಗ್ಗೆ ಒಂದಷ್ಟು:
ದೀಪಾವಳಿ ‘ದೀಪಾ’ ಎಂದರೆ ಮಣ್ಣಿನ ದೀಪ ಹಾಗೂ ‘ವಲಿ’ ಎಂದು ಯಾವುದಾದರು ವಸ್ತು ಸರಣಿಯಾಗಿಯಿಡುವುದು. ದೀಪಾವಳಿಯ ಅಮವಾಸ್ಯೆಯನ್ನು ದೀವಾಳಿ ಅಮಾವಾಸ್ಯೆಯೆಂದು ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಆ ದಿನ ಕತ್ತಲೆಯಿಂದ ಕೂಡಿರುತ್ತದೆ. ದೀಪಾವಳಿ ಹಬ್ಬವನ್ನು ಹಿಂದೂಗಳ ಹಬ್ಬ ಮಾತ್ರ ಆಗಿರದೇ ಈ ಹಬ್ಬವನ್ನು ಜೈನ್, ಸಿಖ್‍ಗಳು ಹಾಗೂ ಬೌದ್ಧರು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ.
ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೆ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಹಬ್ಬವನ್ನು ಆಚರಿಸುತ್ತಾರೆ. ಆದರೆ ಎಲ್ಲರ ಪ್ರಕಾರ ದೀಪಾವಳಿ ಹಬ್ಬ ರಾಮಾಯಣದ ಕಥೆಗೆ ಹೊಂದಿಕೊಂಡಿದೆ.
ರಾವಣನನ್ನು ಸಂಹಾರ ಮಾಡಿ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಲಂಕೆಯಿಂದ ಆಯೋಧ್ಯೆಗೆ ಹಿಂದಿರುಗಿದ ದಿನ. ಅಲ್ಲದೇ ರಾಮ ಪಟ್ಟಾಭಿಷೇಕಗೊಂಡ ದಿನ. ಹಾಗಾಗಿ ಜನರು ಆ ದಿನ ಆನಂದದಿಂದ ದೀಪಗಳನ್ನು ಬೆಳಗಿಸಿ ರಾಮನನ್ನು ಸ್ವಾಗತಿಸಿದ್ದರು. ಅಲ್ಲದೇ ಪಾಂಡವರು ಕೂಡ ಅದೇ ದಿನ ತಮ್ಮ ಅಜ್ಞಾತವಾಸವನ್ನು ಮುಗಿಸಿದ ದಿನ ಎನ್ನುವ ಕಥೆಯು ಇದೆ.ಅಂತೂ ದೀಪಾವಳಿ ಎಂದರೆ ಬೆಳಕಿನ ಸಂಭ್ರಮ, ಖುಷಿಯ ಸಂಗಮ.ಆದಷ್ಟು ದೀಪಾವಳಿಯ ಬೆಳಕಲ್ಲಿ ಕಳೆದುಹೋಗೋಣ.